ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಯಿದೆ: ಉಗ್ರಪ್ಪ

ಬೆಂಗಳೂರು, ಮಾ.19: ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆಯಿದೆ. ನೋಟಿಸ್ ಬಂದರೆ ಅದಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಉತ್ತರ ನೀಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅವರು, 2010ರಿಂದ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯ ಮತದಾರನಾಗಿದ್ದು, ಪಾವಗಡದ ನನ್ನ ಊರಿನಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆದುಹಾಕುವಂತೆ 2015ರ ಆಗಸ್ಟ್‌ನಲ್ಲಿ ಚುನಾವಣಾಧಿಕಾರಿಗೆ ನಾನೇ ಸ್ವತಃ ಅರ್ಜಿ ಕೊಟ್ಟು ಮನವಿ ಮಾಡಿದ್ದೇನೆ ಎಂದರು.
ನನ್ನ ಹೆಸರನ್ನು ಪಾವಗಡದ ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳು ಲಭ್ಯವಿದ್ದು, ಈಗಾಗಲೇ ಅದನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದೇನೆ. ಮತ್ತೆ ನನ್ನ ಹೆಸರು ಹೇಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂಬುದು ಗೊತ್ತಿಲ್ಲ ಎಂದು ಅವರು ಹೇಳಿದರು.
ಬಿಜೆಪಿಯ ದ್ವಿಮುಖ ಧೋರಣೆ: ಬಿಜೆಪಿ ಮುಖಂಡರಾದ ಡಿ.ಎಸ್.ವೀರಯ್ಯ (ಕೋಲಾರ-ಬೆಂಗಳೂರು) ಹಾಗೂ ಜಗ್ಗೇಶ್(ತುರುವೇಕೆರೆ-ಬೆಂಗಳೂರು) ಎರಡು ಕಡೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಅಲ್ಲದೆ, ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.
ಈವರೆಗೆ ಅವರಿಬ್ಬರೂ ತಮ್ಮ ಹೆಸರುಗಳನ್ನು ಹೆಚ್ಚುವರಿಯಾಗಿರುವ ಮತದಾರರ ಪಟ್ಟಿಯಿಂದ ತೆಗೆಸಿಲ್ಲ. ಈ ಬಗ್ಗೆ ಬಿಜೆಪಿಯ ಯಾವ ಕಾರ್ಯಕರ್ತರು, ನಾಯಕರು ಮಾತನಾಡುವುದಿಲ್ಲ. ನನ್ನ ಸಾರ್ವಜನಿಕ ಜೀವನದಲ್ಲಿ ಕಾನೂನಿನ ವಿರುದ್ಧವಾಗಿ ಎಂದಿಗೂ ನಡೆದುಕೊಂಡಿಲ್ಲ ಎಂದು ಉಗ್ರಪ್ಪ ಹೇಳಿದರು.
ಜೆಎನ್‌ಯು ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳುಹಿಸುವ ಬಿಜೆಪಿಯವರು, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ 'ಪಾಕಿಸ್ತಾನ್ ಜಿಂದಾಬಾದ್' ಎಂದರೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಉಗ್ರಪ್ಪ ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ನೇಹಿತನಿಂದ ಉಡುಗೊರೆ ರೂಪದಲ್ಲಿ ಬಂದ ಕೈಗಡಿಯಾರಕ್ಕೆ ತೆರಿಗೆ ಪಾವತಿಸಿ ಅದನ್ನು ರಾಜ್ಯದ ಆಸ್ತಿ ಎಂದು ಘೋಷಣೆ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ವಿದೇಶದ ಉದ್ಯಮಿಯೊಬ್ಬರಿಂದ 2.80 ಕೋಟಿ ರೂ.ವೌಲ್ಯದ ಸೂಟ್ ಪಡೆದು ಧರಿಸುತ್ತಾರೆ. ಆದರೆ, ಅದಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿಸುವುದಿಲ್ಲ. ಈ ವಿಚಾರ ಬಿಜೆಪಿ ಮುಖಂಡರ ಕಣ್ಣಿಗೆ ಕಾಣುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.





