ಹಂಪಿಯಲ್ಲಿ ಹೀಗಾಗಬಾರದಿತ್ತು...

ನಮ್ಮ ವಿಶ್ವವಿದ್ಯಾನಿಲಯಗಳಿಗೆ ಈಗ ಕಷ್ಟಕಾಲ. ಕೆಲವಕ್ಕಂತೂ ತಮ್ಮ ರಾಷ್ಟ್ರೀಯತೆ, ದೇಶಾಭಿಮಾನಗಳನ್ನೇ ಸಾಬೀತುಪಡಿಸಬೇಕಾದಂಥ ಅಗ್ನಿದಿವ್ಯ.ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ, ಅಲೀಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ, ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯ, ಚೆನ್ನೆನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೀಗೆ ಕೆಲವು ವಿಶ್ವವಿದ್ಯಾನಿಲಯಗಳು ಕೇಂದ್ರ ಸರಕಾರದ ಅಗ್ನಿಪರೀಕ್ಷೆಗೆ ಗುರಿಯಾಗಿ ಸುದ್ದಿಯಲ್ಲಿವೆ. ಈಗ ನಮ್ಮ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವೂ ಸುದ್ದಿಯಲ್ಲಿದೆ. ಕಾರಣ ಬೇರೆ ಬೇರೆ ಎನ್ನಿಸಬಹುದಾದರೂ ಮೂಲತಃ ನಮ್ಮ ವಿದ್ವತ್ತು ಮತ್ತು ವಿವೇಕಗಳಿಗೆ ಸಂಬಂಸಿದ್ದೇ ಆಗಿದೆ.
ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯಲ್ಲಿ ಮೊದಲಿನಿಂದಲೂ ಎಡ-ಬಲ ರಾಜಕೀಯ ಹಿತಾಸಕ್ತಿಗಳ ನಡುವೆ ಸಂಘರ್ಷವಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಸಲದ ಚುನಾವಣೆಯಲ್ಲೂ ಎಡ ಪಕ್ಷ ಜಯ ಸಾಸಿದಾಗ ಬಲಪಂಥೀಯರು ಹತಾಶೆಗೊಂಡಿದ್ದಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಅದು ವಿಕೋಪಕ್ಕೆ ಹೋಗಲು ಕಾರಣವಿಲ್ಲದಿಲ್ಲ. ಏನಕೇನ ಪ್ರಕಾರೇಣ ಎಡವನ್ನು ಮಣ್ಣುಮುಕ್ಕಿಸಿ ತನ್ನ ಆಪತ್ಯ ಸ್ಥಾಪಿಸಲು ಎಬಿವಿಪಿ ಅತ್ಯುತ್ಸಾಹ ತೋರಿದ್ದಕ್ಕೆ ಕೇಂದ್ರದಲ್ಲಿ ಮಾತೃ ಪಕ್ಷವೇ ಆಡಳಿತ ಸೂತ್ರ ಹಿಡಿದಿರುವುದಕ್ಕಿಂತ ಬಲವಾದ ಮತ್ತೊಂದು ಕಾರಣ ಬೇಕಿಲ್ಲ. ಎಡಪಂಥೀಯ ಸಂಘಟನೆಯನ್ನು ದೇಶದ್ರೋಹಿಯೆಂದು ಬಿಂಬಿಸುವ ಬಲಪಂಥೀಯರ ಸಂಚಿನಲ್ಲಿ ಮಾಧ್ಯಮವೂ ಭಾಗಿಯಾದದ್ದು ಮಾತ್ರ ಒಂದು ದುರಂತ. (ಪ್ರಯೋಗಾಯದಲ್ಲಿ ಇದು ಸಾಬೀತಾಗಿದೆ). ಇದರ ಹಿಂದೆಲ್ಲ ಕೆಲಸಮಾಡಿರುವುದು ಕೆಲವರಲ್ಲಿ ಆಳವಾಗಿ ಬೇರೂರಿರುವ ಧರ್ಮ, ಮೇಲ್ಜಾತಿ- ಕೀಳ್ಜಾತಿ ಎಂಬ ಪೂರ್ವಗ್ರಹಗಳು- ಪೂರ್ವಾಗ್ರಹಗಳು.ಜೆಎನ್‌ಯು, ಹೈದರಾಬಾದ್ ಕೇಂದ್ರೀಯ ವಿದ್ಯಾಲಯ, ಚೆನ್ನೆನ ಐಐಟಿ ಘಟನೆಗಳಲ್ಲಿ ಇದು ಸ್ಪಷ್ಟ. ಅಲೀಗಡ ಮತ್ತು ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯಗಳ ವಿದ್ಯಮಾನಗಳು ಸಾಂಸ್ಥಿಕ ಸ್ವರೂಪದವು. ಕೇಂದ್ರದಲ್ಲಿ ಬಿಜೆಪಿ ಅಕಾರಕ್ಕೆ ಬಂದ ನಂತರ ಹೆಚ್ಚಾಗಿ ಹೊಗೆ ಕಾರುತ್ತಿರುವುದು ಈ ಪೂರ್ವಗ್ರಹಗಳು, ಆಗ್ರಹಗಳು.
ನಮ್ಮ ಯುವಜನಾಂಗವನ್ನು ಪ್ರಬುದ್ಧರನ್ನಾಗಿ ಬೆಳೆಸಬೇಕಾದ ಈ ಕಲಿಕಾ ಕೇಂದ್ರಗಳು ಏಕೆ ಅಶಾಂತಿಯ, ಗಲಭೆ-ಗೊಂದಲಗಳ ಗೂಡುಗಳಾಗುತ್ತಿವೆ? ಜ್ಞಾನಾರ್ಜನೆ ಆಭಾದಿತವಾಗಿರಬೇಕು, ಅನಿರ್ಬಂತವಾಗಿರಬೇಕು, ಮುಕ್ತವಾಗಿರಬೇಕು. ಇದಕ್ಕೆ ಮುಕ್ತ ವಾತಾವರಣ ಇರಬೇಕು. ದುರದೃಷ್ಟವಶಾತ್ ವಿಶ್ವವಿದ್ಯಾನಿಲಯಗಳಲ್ಲಿನ ವಾತಾವರಣ ಮುಕ್ತಕಲಿಕೆ-ಚಿಂತನೆಗಳಿಗೆ ಅವಕಾಶವೇ ಇಲ್ಲದಷ್ಟು ಕಲುಷಿತಗೊಂಡಿವೆ. ಇದು ರಾಜಕೀಯ ದುರ್ಗಂಧದಿಂದ ಕಲುಷಿತಗೊಂಡಿರುವ ವಾತಾವರಣ. ಯುವಜನರು ದೇಶದ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬಾರದು ಎಂದೇನಿಲ್ಲ. ಸ್ವಾತಂತ್ರ್ಯಪೂರ್ವದಿಂದಲೂ ದೇಶದ ಯುವಜನತೆ ರಾಜಕೀಯ ಪ್ರಜ್ಞೆ ಮೈಗೂಡಿಸಿಕೊಂಡು, ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಷ್ಟನಷ್ಟ-ಶಿಕ್ಷೆಗಳನ್ನು ಅನುಭವಿಸಿದ ಐತಿಹಾಸಿಕ ನಿದರ್ಶನ ನಮ್ಮ ಕಣ್ಮುಂದಿದೆ. ಆದರೆ ಇವತ್ತು ನಾವು ವಿಶ್ವವಿದ್ಯಾನಿಲಯಗಳ ಆವರಣಗಳಲ್ಲಿ ಕಾಣುತ್ತಿರುವುದು ಪಕ್ಷ ರಾಜಕೀಯ. ಎಡ-ಬಲ ಸೇರಿ ಎಲ್ಲ ಪಕ್ಷಗಳ ವಿದ್ಯಾರ್ಥಿ ಶಾಖೆಗಳನ್ನೂ ನಾವಿಂದು ಶಾಲಾ ಕಾಲೇಜುಗಳಲ್ಲಿ ಕಾಣುತ್ತಿದ್ದೇವೆ. ರಾಜಕೀಯ ಪಕ್ಷಗಳು ಈ ಶಾಖೆಗಳ ಪೋಷಕರು. ಎಂದೇ ಮಾತೃಪಕ್ಷಗಳಲ್ಲಿರುವ ಜಾತಿ ರಾಜಕಾರಣ, ವರ್ಗ ರಾಜಕಾರಣ, ಧರ್ಮ ರಾಜಕಾರಣ ಇತ್ಯಾದಿ ಸಕಲ ಪಿಡುಗುಗಳನ್ನೂ ವಿಶ್ವವಿದ್ಯಾನಿಲಯಗಳಲ್ಲಿ ನಾವಿಂದು ಕಾಣುತ್ತಿದ್ದೇವೆ. ಎಲ್ಲ ರಾಜಕೀಯ ಪಕ್ಷಗಳೂ ಯುವಶಕ್ತಿಯನ್ನು ತಮ್ಮ ಪಕ್ಷ ರಾಜಕೀಯ ಹಿತಾಸಕ್ತಿಗಳ ಈಡೇರಿಕೆಗೆ ಯಾವ ಹಿಂಜರಿಕೆಯಿಲ್ಲದೆಯೂ ಬಳಸಿಕೊಳ್ಳುತ್ತಿರುವ ಹುನ್ನಾರವನ್ನು ಕಾಣುತ್ತಿದ್ದೇವೆ. ಜಾತಿ ರಾಜಕಾರಣವಂತೂ ವಿದ್ಯಾರ್ಥಿ ಸಂಘ/ಶಾಖೆಗಳಷ್ಟೇ ಅಲ್ಲದೆ, ಕುಲಪತಿಗಳು, ಪ್ರಾಧ್ಯಾಪಕರು-ಉಪನ್ಯಾಸಕರುಗಳ ನೇಮಕ, ಸೆನೆಟ್-ಸಿಂಡಿಕೇಟುಗಳಿಗೆ ನೇಮಕ, ಗೌರವ ಡಾಕ್ಟರೆಟ್ ನೀಡಿಕೆ-ಹೀಗೆ ವಿಶ್ವವಿದ್ಯಾನಿಲಯದ ಎಲ್ಲ ಅಂಗಗಳನ್ನೂ ಕ್ಯಾನ್ಸರ್‌ನಂತೆ ಆವರಿಸಿಕೊಂಡಿದೆ. ಎಂದೇ ಇವತ್ತು ವಿಶ್ವವಿದ್ಯಾನಿಲಯಗಳು ಜ್ಞಾನಾರ್ಜನೆಯ ಮುಕ್ತ ತಾಣಗಳಾಗಿ ಉಳಿದಿಲ್ಲ. ಕೊರಳು ಕೊಯ್ಯುವಂತಹ ಕೆಟ್ಟ ರಾಜಕಾರಣಗಳ ಕುರುಕ್ಷೇತ್ರವಾಗಿ ಪರಿಣಮಿಸಿವೆ. ಇನ್ನು ವಿದ್ಯಾರಣ್ಯರ ತಪೋಭೂಮಿ ಹಂಪಿಗೆ ಬರೋಣ. ‘ವಿದ್ಯಾನಗರ’ ಇದರ ಪೂರ್ವನಾಮ. ನಂತರ ರಾಜಮಹಾರಾಜರ ವಿಸ್ತರಣಾಕಾಂಕ್ಷೆಯಿಂದಾಗಿ ಇದು ವಿಜಯನಗರ ಸಾಮ್ರಾಜ್ಯವಾದದ್ದು ಈಗ ಇತಿಹಾಸ. ಕನ್ನಡ ಹಾಗೂ ಕರ್ನಾಟಕದ ವಿವಿಧ ಕ್ಷೇತ್ರಗಳಿಗೆ ಸಂಬಂಸಿದಂತೆ ತೌಲನಿಕ ಅಧ್ಯಯನ, ಕರ್ನಾಟಕದ ಇತಿಹಾಸ, ಕಲೆ, ಧರ್ಮ, ಸಮಾಜ ಮುಂತಾದವುಗಳ ಬಗೆಗಿನ ಸಂಶೋಧನೆ, ಹಸ್ತಪ್ರತಿ ಶಾಸ, ಅನುವಾದ, ಪುರಾತತ್ವ ಶೋಧ, ಜಾನಪದ ಮುಂತಾದ ವಿಭಾಗಗಳನ್ನೊಳ ಗೊಂಡಿರುವಂತೆ ಆಳವಾದ ಅಧ್ಯಯನ, ಸಂಶೋಧನೆಗಳ ಘನತರ ವಾದ ಧ್ಯೇಯೋ ದ್ದೇಶಗಳೊಂದಿಗೆ ಇಲ್ಲಿ ಕನ್ನಡ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಹಂಪಿಯ ಪೂರ್ವ ನಾಮ ಸಾರ್ಥಕಗೊಂಡಿತು. 1991ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕನ್ನಡ ವಿಶ್ವ ವಿದ್ಯಾನಿಲಯದ ಮೊದಲ ಕುಲಪತಿ, ಜ್ಞಾನಪೀಠ ಪ್ರಶಸ್ತಿವಿಜೇತ ಖ್ಯಾತ ಕವಿ ಡಾ.ಚಂದ್ರಶೇಖರ ಕಂಬಾರರು. ಎರಡು ಅವಯಷ್ಟು ಕಾಲ ಕುಲಪತಿಗಳಾಗಿದ್ದ ಕಂಬಾರರು ಕನ್ನಡ ವಿ.ವಿ.ಗೆ ಭದ್ರ ಬುನಾದಿ ನಿರ್ಮಿಸಿದ ಕೀರ್ತಿಗೆ ಭಾಜನರು. ಕನ್ನಡದ ಖ್ಯಾತ ಲೇಖಕಿ, ಸಂಶೋಧಕಿ ಶ್ರೀಮತಿ ಮಲ್ಲಿಕಾ ಘಂಟಿ ಈಗಿನ ಕುಲಪತಿಗಳು.
ಈಗಷ್ಟೆ ಬೆಳ್ಳಿಹಬ್ಬದ ಸಡಗರದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಈ ಇಪ್ಪತ್ನಾಲ್ಕು ವರ್ಷಗಳಲ್ಲಿ ಸಂಶೋಧನೆ, ಭಾಷಿಕ ಅಧ್ಯಯನ, ಅನುವಾದ, ಜಾನಪದ ಮೊದಲಾದವುಗಳಲ್ಲಿ ಗಣನೀಯ ಸಾಧನೆಗೈಯುತ್ತ, ಹೊಸದಿಕ್ಕು-ದಿಗಂತಗಳತ್ತ ಹೆಜ್ಜೆಗಳನ್ನಿಡುತ್ತಾ ಸಾಗಿ ಬಂದಿದೆ. ಕನ್ನಡದ ಸರ್ವತೋಮುಖ ಸಾಧನೆಯನ್ನು ಮುಖ್ಯಗುರಿಯಾಗುಳ್ಳ ಈ ವಿಶ್ವವಿದ್ಯಾನಿಲಯ ಸಂಶೋಧನೆಗೆ ಹೆಚ್ಚು ಮಹತ್ವ ನೀಡುವುದರ ಜೊತೆಗೆ ಪಿಎಚ್‌ಡಿ. ಮತ್ತು ಎಂ.ಫಿಲ್‌ಗಳಲ್ಲಿ ಶಿಕ್ಷಣ ಮತ್ತು ಪದವಿಗಳನ್ನು ನೀಡುತ್ತಿದೆ. ಇದಲ್ಲದೆ ‘ನಾಡೋಜ’ ಗೌರವ ಪದವಿಯನ್ನೂ ನೀಡುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತವಾದ ಸೇವೆ ಸಲ್ಲಿಸಿದ ಮಹನೀಯರಿಗೆ ನೀಡಲಾಗುವ ಈ ಗೌರವ ಪದವಿ, ಜಗತ್ತಿನ ಅನ್ಯ ವಿಶ್ವ ವಿದ್ಯಾನಿಲಯಗಳು ನೀಡುವ ‘ಗೌರವ ಡಾಕ್ಟರೆಟ್’ಗೆ ಸಮನಾದುದು. ಇಲ್ಲಿಯವರೆಗೆ ಎಪ್ಪತ್ತಕ್ಕೂ ಹೆಚ್ಚು ಮಂದಿ ವಿದ್ವಾಂಸರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇಲ್ಲಿ ಪ್ರತಿ ವರ್ಷ ಘಟಿಕೋತ್ಸವವನ್ನು ‘ನುಡಿ ಹಬ್ಬ’ವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯ ನುಡಿ ಹಬ್ಬವನ್ನು ಇತ್ತೀಚೆಗಷ್ಟೇ ಆಚರಿಸಿತು. ಇಪ್ಪತ್ನಾಲ್ಕನೆ ಘಟಿಕೋತ್ಸವವಾಗಿದ್ದ ಈ ನುಡಿ ಹಬ್ಬ ಸಮಾರಂಭ ಕೇವಲ ಮುವತ್ತು ನಿಮಿಷಗಳಲ್ಲಿ ಮುಕ್ತಾಯಗೊಂಡು ಸುದ್ದಿಮಾಡಿತು. ಆದರೆ ಇದು ಹಿತಕರವಾದ ಸುದ್ದಿಯಲ್ಲ. ಅರ್ಧ ಗಂಟೆಯಲ್ಲೇ ಘಟಿಕೋತ್ಸವಕ್ಕೆ ಮಂಗಳ ಹಾಡಬೇಕಾದಂಥ ಅನಿವಾರ್ಯತೆ, ತರಾತುರಿಗಳು ಏನಿದ್ದವೋ ತಿಳಿಯದು. ಶೈಕ್ಷಣಿಕ ರಂಗದಲ್ಲಿ ತೀರಾ ವಿರಳವಾದ, ಅಸಾಮಾನ್ಯವಾದ ಈ ಘಟನೆ ಸಹಜವಾಗಿಯೇ ಅನೇಕರು ಹುಬ್ಬೇರಿಸುವಂತೆ ಮಾಡಿದೆ. ಎರಡು ಕಾರಣಗಳಿಂದಾಗಿ ಇದು ಶೈಕ್ಷಣಿಕ ಹಾಗೂ ವಿದ್ವತ್ ವಲಯಗಳಲ್ಲಿ ತೀವ್ರ ಅಸಮಾಧಾನಕ್ಕೆಡೆ ಮಾಡಿಕೊಟ್ಟಿದೆ. ಘಟಿಕೋತ್ಸವ ಭಾಷಣ ಮಾಡುವಂತೆ ಆಮಂತ್ರಿಸಲಾಗಿದ್ದ ಗೌರವಾನ್ವಿತ ಅತಿಥಿ ವಿದ್ವಾಂಸರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರಿಗೆ ಕೊನೆಗಳಿಗೆಯಲ್ಲಿ ಕೇವಲ ಮುವತ್ತು ನಿಮಿಷಗಳಲ್ಲಿ ಭಾಷಣ ಮುಗಿಸುವಂತೆ ತಾಕೀತು ಮಾಡಿದ್ದು ಈ ಅಸಮಾಧಾನಕ್ಕೆ ಮೊದಲನೆಯ ಕಾರಣವಾದರೆ, ಎರಡನೆಯದು ಈ ವರ್ಷ ‘ನಾಡೋಜ’ ಗೌರವ ಪದವಿ ಪ್ರದಾನಮಾಡದೇ ಇರುವುದು. ಮೊದಲನೆಯದು ಬಹುಶ: ಭಾರತದ ವಿಶ್ವವಿದ್ಯಾನಿಲಯಗಳ ಇತಿಹಾಸದಲ್ಲೇ ನಭೂತೋ ಎನ್ನಬಹುದಾದಂಥಾದ್ದು.
ಇನ್ನು ‘ನಾಡೋಜ’ಗೌರವ ಪದವಿ ನೀಡದೇ ಇರುವುದು ಕನ್ನಡ ವಿಶ್ವವಿದ್ಯಾನಿಲಯದ ಇಪ್ಪತ್ನಾಲ್ಕು ವರ್ಷಗಳ ಇತಿಹಾಸದಲ್ಲೇ ಮೊದಲು. ಈ ವರ್ಷ ಕನ್ನಡ ವಿ.ವಿ.ಯ ಪ್ರತಿಷ್ಠಿತ ‘ನಾಡೋಜ’ ಪಡೆಯುವ ಅರ್ಹತೆಯುಳ್ಳವರು, ಅತ್ಯುನ್ನತ ಸಾಧನೆ ಮಾಡಿದವರು ನಾಡಿನಲ್ಲಿ ಯಾರೂ ಇಲ್ಲ ಎಂಬುದು ಕುಲಾಪತಿಗಳ ತೀರ್ಮಾನವಿದ್ದೀತು ಎಂದು ಭಾವಿಸಬಹುದೇ?
ಸ್ನಾತಕರಿಗೆ ಪದವಿ ಎನ್ನವುದು ಭವಿಷ್ಯ ಜೀವನಕ್ಕೆ ಚಿಮ್ಮುಹಲಗೆಯಿದ್ದಂತೆ. ಪದವಿ ಪ್ರದಾನ ಮಾಡುವ ಘಟಿಕೋತ್ಸವವೆನ್ನುವುದು ಮಾರ್ಗದರ್ಶನ ನೀಡುವ ಬದ್ಧಿಮಾತು, ಹಿತವಚನಗಳನ್ನು ಹೇಳಿ ಯುವಜನತೆಯನ್ನು ಭವಿಷ್ಯಕ್ಕೆ ಬೀಳ್ಕೊಡುವ ಸಮಾರಂಭ. ಇದೇ ಘಟಿಕೋತ್ಸವದ ಮಹತ್ವ. ಎಂದೇ ಘಟಿಕೋತ್ಸವದ ಭಾಷಣಕ್ಕೆ ಹೆಚ್ಚಿನ ಪಾವಿತ್ರ್ಯ ಮತ್ತು ಪ್ರಾಮುಖ್ಯ. ಭವಿಷ್ಯದಲ್ಲಿ ಪದಾರ್ಪಣೆ ಮಾಡಲಿರುವ ಯುವಪೀಳಿಗೆಗೆ ಹಿತವಚನ ಹೇಳಲು, ಮಾರ್ಗದರ್ಶನ ಮಾಡಲು ಮಾತಾಪಿತೃ ಸಮಾನರಾದವರೇ ಅರ್ಹರು. ಇಂಥ ಅರ್ಹತೆಯುಳ್ಳವರನ್ನು ಆಯ್ಕೆಮಾಡಿ, ಅವರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲವೆಂದರೆ ಹೇಗೆ? ಇದೊಂದು ನೈತಿಕ ಅಪಚಾರ. ಪುರುಷೋತ್ತಮ ಬಿಳಿಮಲೆಯವರು ಈ ವರ್ಷ ಇಂಥ ಘಟಿಕೋತ್ಸವ ಭಾಷಣ ಮಾಡಲು ಆಹ್ವಾನಿತರಾದವರು, ಹೆಸರಾಂತ ಜಾನಪದ ವಿದ್ವಾಂಸರು. ವಿದ್ವತ್ತು ಮತ್ತು ವಯಸ್ಸಿನಲ್ಲೂ ಹಿರಿಯರು. ವಿಶ್ವಮಾನ್ಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕನ್ನಡ ಪೀಠದ ಪ್ರಾಧ್ಯಾಪಕರು. ಮಿಗಿಲಾಗಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸಿದವರು. ಘಟಿಕೋತ್ಸವ ಭಾಷಣ ಮಾಡಲು ಈ ವಿದ್ವಾಂಸರಿಗಿರುವ ಅರ್ಹತೆ, ಯೋಗ್ಯತೆಗಳು ವಿಶ್ವವಿದ್ಯಾನಿಲಯಕ್ಕೆ ಚೆನ್ನಾಗಿ ಗೊತ್ತಿರಲೇ ಬೇಕು. ಭವಿಷ್ಯದ ಜನಾಂಗವನ್ನುದ್ದೇಶಿಸಿ ಹಿತವಚನ ಹೇಳಲು, ಮಾರ್ಗದರ್ಶನ ನೀಡಲು ಯೋಗ್ಯರು ಎಂಬ ಅಂಶ ಮನವರಿಕೆಯಾದ ಮೇಲೆ ಪುರುಷೋತ್ತಮರನ್ನು ಆಮಂತ್ರಿಸುವ ನಿರ್ಧಾರಕ್ಕೆ ಬಂದಿರಬೇಕು. ಹೀಗಿದ್ದೂ ಇಂಥ ಘನತೆವೇತ್ತರಿಗೆ ಘಟಿಕೋತ್ಸವದ ಪೂರ್ಣಭಾಷಣ ಮಾಡಲು ಅವಕಾಶ ನಿರಾಕರಿಸಿದ್ದೇಕೆ? ಭಾಷಣವನ್ನು ಮುವತ್ತು ನಿಮಿಷಗಳಿಗೆ ಮೊಟಕುಗೊಳಿಸುವಂತೆ ಹೇಳಿದ್ದೇಕೆ? ರಾಜ ಭವನದ ಶಿಷ್ಟಾಚಾರವೇನಾದರು ಅಡ್ಡಿಬಂದಿದ್ದಲ್ಲಿ ಅದು ಸಲ್ಲದ ನಡೆಯಾಗುತ್ತದೆ.
ಘಟಿಕೋತ್ಸವದ ಭಾಷಣವನ್ನು ಕೇಳಿಸಿಕೊಳ್ಳುವಂಥ ಸಾವಧಾನವೂ ರಾಜ್ಯಪಾಲರಾದ ಕುಲಾಪತಿಗಳಿಗಿರಲಿಲ್ಲವೆ ಎಂಬ ಶಂಕೆ ಶೈಕ್ಷಣಿಕ ವಲಯದಲ್ಲಿ ಅನಪೇಕ್ಷಣೀಯ ಸಂದೇಶವನ್ನೇ ಬೀರುತ್ತದೆ. ಪುರುಷೋತ್ತಮ ಬಿಳಿಮಲೆಯವರು ಜೆಎನ್‌ಯುನ ಇತ್ತೀಚಿನ ವಿದ್ಯಮಾನಗಳನ್ನು ಕುರಿತು ಕನ್ನಡ ಪತ್ರಿಕೆಯೊಂದರಲ್ಲಿ ಬರೆದ ಲೇಖನಕ್ಕೂ ಇದಕ್ಕೂ ಏನಾದರೂ ಬಾದರಾಯಣ ಸಂಬಂಧ ಇರಬಹುದೆ ಎನ್ನುವಂಥ ಶಂಕೆಗಳು ಸಾರ್ವಜನಿಕರ ಮನದಲ್ಲಿ ಉದ್ಭವಿಸಿದಲ್ಲಿ ಅದು ಸಹಜ. ಹಾಗಾದಲ್ಲಿ ಪಟ್ಟಭದ್ರಹಿತ ವ್ಯವಸ್ಥೆ ಯಾವ್ಯಾವ ದಿಕ್ಕಿನಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಬಹುದು ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನವಾದೀತು. ಪುರುಷೋತ್ತಮ ಬಿಳಿಮಲೆಯವರೂ ತಮ್ಮ ಅಲ್ಪಾವ ಭಾಷಣದಲ್ಲಿ ಆಡಿರುವ ಕೆಲವು ಮಾತುಗಳು ಇಂಥ ಸಂಶಯವನ್ನು ದೃಢಪಡಿಸುತ್ತವೆ. ಮುಂದೆಯೂ ಹೀಗೆ ಮಾಡುವುದಾದಲ್ಲಿ ವಿದ್ವಾಂಸರ ಬದಲಾಗಿ ಸ್ಥಳೀಯ ರಾಜಕಾರಣಿಗಳನ್ನು ಕರೆಸಿಕೊಳ್ಳುವುದು ಸೂಕ್ತ ಎಂದಿರುವ ಬಿಳಿಮಲೆಯವರು, ಇಂದು ಎರಡೆರಡು ಬಾರಿ ಯೋಚಿಸಿ ಬರೆಯಬೇಕಾದ, ಮಾತಾಡಬೇಕಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸಂಶೋಧನೆಗಳು ಪೇಲವವಾಗುವುದರಲ್ಲಿ ಅನುಮಾನವಿಲ್ಲ ಎಂದು ನುಡಿದಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದಿರುವ ಅಂಕುಶ. ಪ್ರಯೋಗ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನುಸುಳುತ್ತಿರುವ ರಾಜಕೀಯ ದುಷ್ಪ್ರಭಾವ ಕುರಿತಂತೆ ಆತಂಕದ ಸೂಚಿಯೇ ಆಗಿವೆ. ಇದೆಲ್ಲ ಏನೇ ಇರಲಿ, ವಿದ್ಯಾರ್ಥಿಗಳಿಗೆ ಜೀವಮಾನವಿಡೀ ಸ್ಮರಣೀಯವಾಗಬಹುದಾದಂತಹ ಘಟಿಕೋತ್ಸವ ಭಾಷಣವನ್ನು, ಸಮಾರಂಭದ ಘನತೆಗೆ ಚ್ಯುತಿ ತರುವ ರೀತಿಯಲ್ಲಿ ಮೊಟಕುಗೊಳಿಸಿದ್ದು ಅಕ್ಷಮ್ಯ.
ನಾಡೋಜ ಗೌರವಕ್ಕೆ ಯೋಗ್ಯರಾದವರನ್ನು ಕುಲಾಪತಿಗಳಿಗೆ ಶಿಫಾರಸು ಮಾಡುವುದು ವಿಶ್ವವಿದ್ಯಾನಿಲಯದ ಕರ್ತವ್ಯ. ಅದಕ್ಕೆ ಕುಲಾಪತಿಗಳು ಅಂಗೀಕಾರದ ಮದ್ರೆಯೊತ್ತಬೇಕು. ಸಂಪ್ರದಾಯದಂತೆ ಈ ವರ್ಷವೂ ಕನ್ನಡ ವಿ.ವಿ. ನಾಡೋಜ ಗೌರವಕ್ಕೆ ಕೆಲವು ಹೆಸರುಗಳನ್ನು ಶಿಫಾರಸು ಮಾಡಿದ್ದು ಅದಕ್ಕೆ ಕೊನೆ ಗಳಿಗೆಯವರೆಗೆ ಕುಲಾಪತಿಗಳ ಕಚೇರಿಯಿಂದ ಸಮ್ಮತಿ ದೊರಕಿಲ್ಲ. ಅಥವಾ ಅಸಮ್ಮತಿ/ಆಕ್ಷೇಪವೂ ತಿಳಿದು ಬಂದಿಲ್ಲ. ಹೀಗಾಗಿ ಈ ವರ್ಷ ‘ನಾಡೋಜ’ ಪ್ರದಾನವಾಗಿಲ್ಲ. ಕುಲಾಪತಿಗಳ ಈ ದಿವ್ಯ ವೌನಕ್ಕೆ ಕಾರಣ ತಿಳಿದು ಬಂದಿಲ್ಲ. ಈ ವರ್ಷ ‘ನಾಡೋಜ’ ಗೌರವಕ್ಕೆ ಶಿಫಾರಸು ಮಾಡಲಾದವರಲ್ಲಿ ಯೋಗ್ಯರಾದವರು ಯಾರೂ ಇಲ್ಲ ಎಂಬುದು ಕುಲಾಪತಿಗಳ ತೀರ್ಮಾನವಾಗಿರಬಹುದೇ? ಇವೆರಡೂ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಶೀಲದ ಮೇಲಣ ಕಪ್ಪು ಚುಕ್ಕೆ ಇದ್ದಂತೆ. ಹೀಗಾಗಬಾರದಿತ್ತು. ಹೀಗೇಕಾಯಿತು ಎಂದು ತಿಳಿದುಕೋಳ್ಳುವ ಹಕ್ಕು ಕನ್ನಡಿಗರಿಗಿದೆ.
ಭರತ ವಾಕ್ಯ:
ನಮ್ಮ ವಿ.ವಿ.ಗಳು
ವಿಶ್ವವಿದ್ಯಾ‘ಲಯ’ ಗಳಾಗದಿರಲಿ,
ಲಯ ಇರಲಿ,
ಮಾನವೋನ್ನತಿ ಗುರಿಯ ವಿದ್ಯೆಯಲಿ,
ನಡೆ ನುಡಿಯಲ್ಲಿ







