ವೈರಮುಡಿ ಮೆರವಣಿಗೆ ವೇಳೆ ಕಳ್ಳರ ಕೈಚಳಕ
ಮಂಡ್ಯ: ಕಾರಿನ ಗಾಜು ಒಡೆದು 5 ಲಕ್ಷ ರೂ. ಕಳವು
ಪಾಂಡವಪುರ, ಮಾ.19: ಪಟ್ಟಣದ ಎನ್.ಎಂ.ರಸ್ತೆಯಲ್ಲಿರುವ ಮಹೇಂದ್ರ ಷೋರೂಂ ಹಿಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು 5ಲಕ್ಷ ರೂ.ಗಳನ್ನು ಹಾಡಹಗಲೇ ಕಳವು ಮಾಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಬೆಂಗಳೂರಿನ ರಾಜಾಜಿನಗರದ ಪ್ರವೀಣ್‌ಕುಮಾರ್ ಎಂಬುವರೇ ಹಣ ಕಳೆದುಕೊಂಡವರಾಗಿದ್ದಾರೆ.ಪ್ರಕರಣದ ವಿವರ: ಪ್ರವೀಣ್‌ಕುಮಾರ್ ಪಾಂಡವಪುರದ ವಿಜಯಾ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆ್ ಮೈಸೂರಿನಲ್ಲಿ ಚಿನ್ನವನ್ನು ಗಿರವಿ ಇಟ್ಟಿದ್ದು, ಅದನ್ನು ಬಿಡಿಸಿಕೊಳ್ಳಲು ಮೈಸೂರಿನ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಶುಕ್ರವಾರ 9 ಲಕ್ಷ ನಗದು ಡ್ರಾ ಮಾಡಿಕೊಂಡು ಶನಿವಾರ ಪಾಂಡವಪುರಕ್ಕೆ ಬಂದಿದ್ದರು ಎನ್ನಲಾಗಿದೆ.
ಪ್ರವೀಣ್‌ಕುಮಾರ್ ತಾನು ತಂದಿದ್ದ 9 ಲಕ್ಷ ರೂ.ಗಳಲ್ಲಿ 4 ಲಕ್ಷ ರೂ. ಪಾವತಿಸಿ ಪಾಂಡವಪುರದ ಬ್ಯಾಂಕಿನಲ್ಲಿದ್ದ ಚಿನ್ನಾಭರಣ ಬಿಡಿಸಿಕೊಂಡಿದ್ದಾರೆ. ಉಳಿದ 5 ಲಕ್ಷ ರೂ.ಗಳನ್ನು ಕಾರಿನಲ್ಲಿ ಕುಳಿತಿದ್ದ ತನ್ನ ಸಹೋದರಿಯ ಬಳಿ ಇರಿಸಿದ್ದರು. ಚಿನ್ನ ಬಿಡಿಸಿಕೊಂಡ ನಂತರ ಪಟ್ಟಣದ ಎನ್.ಎಂ.ರಸ್ತೆಯ ಮಹೇಂದ್ರ ಷೋರೂಂ ಮುಂಭಾಗ ಬಂದಾಗ ಮೇಲುಕೋಟೆಗೆ ವೈರಮುಡಿ ಮೆರವಣಿಗೆ ಹೊರಟಿತ್ತು.
ವೈರಮುಡಿ ಮೆರವಣಿಗೆ ಸಾಗುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಇದರಿಂದ ಪ್ರವೀಣ್‌ಕುಮಾರ್ ಮಹೇಂದ್ರ ಷೋರೂಂ ಹಿಂಭಾಗ ಕಾರು ನಿಲ್ಲಿಸಿ ವೈರಮುಡಿ ಉತ್ಸವ ನೋಡಲು ಸಹೋದರಿಯೊಂದಿಗೆ ಕಾರಿನಿಂದ ಇಳಿದಿದ್ದಾರೆ ಎನ್ನಲಾಗಿದೆ.ದೇ ಸಮಯದಲ್ಲಿ ದುಷ್ಕರ್ಮಿಗಳು ಕಾರಿನ ಹಿಂಭಾಗದ ಗಾಜನ್ನು ಒಡೆದು ಕಾರಿನಲ್ಲಿಟ್ಟಿದ್ದ 5 ಲಕ್ಷ ರೂ.ಗಳನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಪಟ್ಟಣ ಠಾಣೆಯ ಪಿಎಸ್ಸೆ ಐಯಣ್ಣಗೌಡ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪಿಕ್‌ಪಾಕೆಟ್: ಓರ್ವನ ಬಂಧನ
ಪಾಂಡವಪುರ, ಮಾ.19: ಮಂಡ್ಯದಿಂದ ಮೇಲುಕೋಟೆಗೆ ಹೊರಟಿದ್ದ ವೈರಮುಡಿ ಮೆರವಣಿಗೆ ಪಟ್ಟಣಕ್ಕೆ ಆಗಮಿಸಿದ ವೇಳೆ ಪಿಕ್‌ಪಾಕೆಟ್ ಮಾಡಿ ಪರಾರಿಯಾಗುತ್ತಿದ್ದವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಪ್ರವೀಣ್‌ಕುಮಾರ್ ಅವರ ಕಾರಿನಲ್ಲಿರಿಸಿದ್ದ 5ಲಕ್ಷ ರೂ. ಕಳವು ನಡೆದ ಸಂದರ್ಭದಲ್ಲೇ, ವೈರಮುಡಿ ಉತ್ಸವದ ವೇಳೆ ವ್ಯಕ್ತಿಯೊಬ್ಬರ ಜೇಬಿಗೆ ಕತ್ತರಿ ಹಾಕಿದ ಕಳ್ಳ ಹತ್ತು ಸಾವಿರ ರೂ. ದೋಚಿಕೊಂಡು ಪರಾರಿಯಾಗುತ್ತಿದ್ದಾಗ, ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.







