ಉಳಿತಾಯ ಖಾತೆಗಳ ಬಡ್ಡಿದರ ಕಡಿತ ಉಳಿತಾಯಕ್ಕೂ ದೊಡ್ಡ ಹೊಡೆತ
ಹೊಸದಿಲ್ಲಿ,ಮಾ.19: ಸಾರ್ವಜನಿಕ ಭವಿಷ್ಯನಿಧಿ(ಪಿಪಿಎಫ್), ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್(ಎನ್‌ಎಸ್‌ಸಿ) ಮತ್ತು ಕಿಸಾನ್ ವಿಕಾಸ ಪತ್ರ(ಕೆವಿಪಿ)ಗಳಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಸರಕಾರವು ಶುಕ್ರವಾರ ತೀವ್ರವಾಗಿ ಕಡಿತಗೊಳಿಸಿದೆ. ಇದರಿಂದಾಗಿ ಎಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಉಳಿತಾಯದ ಮೇಲಿನ ಪ್ರತಿಫಲದಲ್ಲಿ 90 ಮೂಲಾಂಕಗಳವರೆಗೆ ಇಳಿಕೆಯಾಗಲಿದೆ.
ಸರಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿತಗೊಳಿಸಬಹುದು ಎಂಬ ಊಹಾಪೋಹ ಕಳೆದ ಜನವರಿಯಿಂದಲೇ ಕೇಳಿಬರುತ್ತಿತ್ತಾದರೂ ಇಷ್ಟೊಂದು ತೀವ್ರ ಪ್ರಮಾಣದಲ್ಲಿ ಕಡಿತಗೊಳಿಸಿರುವುದು ಅಚ್ಚರಿಯನ್ನು ಮೂಡಿಸಿದೆ.
ಮಧ್ಯಮ ವರ್ಗಗಳ ಪಾಲಿಗೆ ನೆಚ್ಚಿನ ಉಳಿತಾಯ ಯೋಜನೆಯಾಗಿರುವ ಪಿಪಿಎಫ್‌ನಲ್ಲಿ 60 ಮೂಲಾಂಕಗಳ (100 ಮೂಲಾಂಕಗಳು ಶೇ.1ಕ್ಕೆ ಸಮ) ಕಡಿತವು ಸುಮಾರು 15ವರ್ಷಗಳಲ್ಲಿ ಅತ್ಯಂತ ತೀವ್ರ ಕಡಿತವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆಯಾಗಲಿದೆಯಾದರೂ ಮುಂದಿನ ಹಣಕಾಸು ವಷರ್ದಲ್ಲಿ ಅದರಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ತನ್ನ ಪಿಪಿಎಫ್ ಖಾತೆಯಲ್ಲಿ ಐದು ಲಕ್ಷ ರೂ.ಹೊಂದಿರುವ ವ್ಯಕ್ತಿ 2016-17ನೆ ಸಾಲಿಗೆ 3,000 ರೂ.ಗಳ ಖೋತಾ ಅನುಭವಿಸಬೇಕಾಗುತ್ತದೆ.
ಬಡ್ಡಿದರ ಇಳಿಕೆಗೆ ಮಧ್ಯಮ ವರ್ಗದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಟುವಾದ ಪ್ರತಿಭಟನೆಗಳು ಹರಿದಾಡುತ್ತಿವೆ.
ಸಣ್ಣ ಉಳಿತಾಯದ ಮೇಲಿನ ಬಡ್ಡಿದರ ಕಡಿತವು ನಿರಖು ಠೇವಣಿಗಳಲ್ಲಿ ದೊಡ್ಡ ಮೊತ್ತ ಇರುವವರಿಗೆ,ವಿಶೇಷವಾಗಿ ಹಿರಿಯ ನಾಗರಿಕರ ಪಾಲಿಗೂ ಕೆಟ್ಟ ಸುದ್ದಿಯಾಗಿದೆ. ಬ್ಯಾಂಕುಗಳೂ ಸರಕಾರದ ಕ್ರಮವನ್ನು ಅನುಸರಿಸಿ ತಮ್ಮ ಬಡ್ಡಿದರಗಳನ್ನು ಕಡಿತಗೊಳಿಸಲಿವೆ.





