ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ತುಮಕೂರು ವಿವಿಯಲ್ಲಿ ಲೈಂಗಿಕ ಕಿರುಕುಳ
ಬೆಂಗಳೂರು, ಮಾ. 19: ತುಮಕೂರು ವಿವಿ ಕಲಾ ಕಾಲೇಜು ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಜಶೇಖರ್‌ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಘಟನೆಯನ್ನು ಎಐಎಂಎಸ್‌ಎಸ್ ತೀವ್ರವಾಗಿ ಖಂಡಿಸಿದೆ.
ಈಗಾಗಲೇ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿವಿ ಮಹಿಳಾ ಕುಂದು-ಕೊರತೆ ಸಮಿತಿ ಎದುರು ರಾಜಶೇಖರ್‌ರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಕಲಾ ಹಾಗೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿಯರು ಹಾಗೂ ಈಗಿನ ಸ್ನಾತಕೋತ್ತರ ವಿದ್ಯಾರ್ಥಿನಿಯರು ಪದವಿ ಓದುವಾಗ ಲೈಂಗಿಕ ಕಿರುಕುಳ ಅನುಭವಿಸಿರುವುದನ್ನು ಹೇಳಿಕೊಂಡಿದ್ದಾರೆ. ಈ ದೂರುಗಳ ಆಧಾರದ ಮೇಲೆ ಸಮಿತಿಯು ಪ್ರಾಥಮಿಕ ವರದಿಯನ್ನು ಕುಲಸಚಿವರಿಗೆ ಸಲ್ಲಿಸಿದೆ.
ರಾಜ್ಯ ಸರಕಾರ ನೇಮಿಸಿರುವ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ನೇತೃತ್ವದ ಸಮಿತಿಯ ಮುಂದೆಯೂ ವಿವಿ ಮಹಿಳಾ ಕುಂದು- ಕೊರತೆ ವಿಭಾಗದ ಅಧ್ಯಕ್ಷೆ ನೂರ್ ಅಫ್ಸಾ ಅವರು ಲೈಂಗಿಕ ಕಿರುಕುಳದ ವಿವರಗಳನ್ನು ಮುಂದಿಟ್ಟಿದ್ದಾರೆ.
ಆ ಹಿನ್ನೆಲೆಯಲ್ಲಿ ವಿವಿಕುಲಪತಿಗಳು ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಾದ ರಾಜಶೇಖರ್ ಮೇಲೆ ಕಾನೂನಾತ್ಮಕ ಕ್ರಮ ಕೈಗೊಂಡು ಉಗ್ರ ಶಿಕ್ಷೆ ವಿಧಿಸಬೇಕೆಂದು ಎಐಎಂಎಸ್‌ಎಸ್ ಉಪಾಧ್ಯಕ್ಷೆ ಶೋಭಾ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







