ಪ್ರಗತಿಪರ-ಅಭಿವೃದ್ಧಿಗೆ ಪೂರಕವಾದ ಬಜೆಟ್: ಡಾ. ಕೆ. ರಹ್ಮಾನ್‌ಖಾನ್
ಬೆಂಗಳೂರು, ಮಾ.19: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ಪ್ರಗತಿಪರ ಹಾಗೂ ಅಭಿವೃದ್ಧಿಗೆ ಪೂರಕವಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಕೆ.ರಹ್ಮಾನ್‌ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೆ ಹಾಗೂ ಕೃಷಿ ವಲಯಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡುವ ಮೂಲಕ ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಲಾಗಿದೆ ಎಂದು ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿನ ಎಲ್ಲ ವರ್ಗಗಳ ಸಾಮಾಜಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು, 11ನೆ ಬಾರಿ ಬಜೆಟ್ ಮಂಡಿಸುತ್ತಿರುವ ಅನುಭವದ ಆಧಾರದಲ್ಲಿ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದೀರಾ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ 1374 ಕೋಟಿ ರೂ.ಗಳನ್ನು ಒದಗಿಸಿರುವುದಕ್ಕೆ ರಹ್ಮಾನ್‌ಖಾನ್ ಅಭಿನಂದನೆ ಸಲ್ಲಿಸಿದ್ದಾರೆ.
ನಿಮ್ಮ ನಾಯಕತ್ವದಲ್ಲಿ ರಾಜ್ಯವು ಅಭಿವೃದ್ಧಿಪಥದತ್ತ ಮುಂದುವರಿಯಲಿ. ಅಲ್ಲದೆ, ಎಲ್ಲ ವಲಯಗಳಲ್ಲೂ ಮುಂಚೂಣಿಯಲ್ಲಿರುವ ದೇಶದ ಪ್ರಮುಖ ರಾಜ್ಯವಾಗಿ ಹೊರಹೊಮ್ಮಲಿ ಎಂದು ಅವರು ಆಶಿಸಿದ್ದಾರೆ.





