ಸ್ವಾಯತ್ತ ಸಂಸ್ಥೆಗಳಿಗೆ ಅಂಕುಶಕ್ಕೆ ಕೇಂದ್ರ ಹುನ್ನಾರ
ಹೊಸದಿಲ್ಲಿ,ಮಾ.19: ಸ್ವಾಯತ್ತ ಸಂಸ್ಥೆಗಳ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಲು ಕೇಂದ್ರ ಸರಕಾರವು ವಿವಿಧ ಮಾರ್ಗೋಪಾಯಗಳನ್ನು ಹುಡುಕುತ್ತಿರುವಂತೆಯೇ, ಜವಾಹರಲ್ ನೆಹರೂ ವಿವಿಯಂತಹ ಕೆಲವು ಸಂಸ್ಥೆಗಳು ಅದಕ್ಕೆ ಮಗ್ಗುಲ ಮುಳ್ಳಾಗಿ ಪರಿಣಮಿಸಿವೆ.
ಇಂತಹ ಸಂಸ್ಥೆಗಳು ‘‘ ತಮ್ಮ ರಚನೆಯ ಉದ್ದೇಶ ಹಾಗೂ ಗುರಿಗಳಿಗೆ’’ ಮಾತ್ರವೇ ಅಂಟಿಕೊಂಡಿರಬೇಕೆಂದು ಕೇಂದ್ರ ಸರಕಾರ ಬಯಸುತ್ತಿದೆಯೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ವಾಯತ್ತೆಯ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಆರ್ಥಿಕ ಬೆಂಬಲದ ಮೊತ್ತವನ್ನು ಕಡಿಮೆ ಗೊಳಿಸಲು ಅದು ದಾರಿಗಳನ್ನು ಹುಡುಕುತ್ತಿದೆಯೆಂದು ಅವರು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ವಿಶ್ವವಿದ್ಯಾನಿಲಯಗಳಿಗೆ ನೀಡ ಲಾಗುತ್ತಿರುವ ಆರ್ಥಿಕ ನೆರವಿನ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಸರಕಾರ ಈಗಾಗಲೇ ವಿವಿಧ ಸಚಿವಾಲಯಗಳ ಅಧಿಕಾರಿಗಳನ್ನೊಳಗೊಂಡ ಎರಡು ಸಮಿತಿಗಳನ್ನು ರಚಿಸಿದೆ.
‘‘ಹಲವು ವರ್ಷಗಳ ಹಿಂದೆ ಕೆಲವು ನಿರ್ದಿಷ್ಟ ಉದ್ದೇಶಗಳು ಹಾಗೂ ಗುರಿಗಳೊಂದಿಗೆ ಹಲವಾರು ಸ್ವಾಯತ್ತ ಸಂಸ್ಥೆಗಳನ್ನು ಸೃಷ್ಟಿಸಲಾಗಿತ್ತು. ಆದರೆ ಸಮಯಕಳೆದಂತೆ ಅವು ಬೇರೆ ಚಟುವಟಿಕೆಗಳಲ್ಲಿ ತೊಡಗಲು ಆರಂಭಿಸಿದವು’’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರ ಸರಕಾರದ ಅರ್ಥಿಕ ನೆರವನ್ನೇ ಸಂಪೂರ್ಣವಾಗಿ ಅವಲಂಭಿಸಿರುವ ಈ ಸಂಸ್ಥೆಗಳು ನಿಯಮಗಳಿಗೆ ಅನುಸಾರವಾಗಿ ನಡೆಯುತ್ತಿಲ್ಲವೆಂದು ಅವರು ಆಪಾದಿಸಿದ್ದಾರೆ.
ವಾಣಿಜ್ಯ, ಆಹಾರ ಹಾಗೂ ಸಾರ್ವಜನಿಕ ವಿತರಣಾ ಸಚಿವಾಲಯದಲ್ಲಿ ಅರ್ಥಿಕ ಸಲಹೆಗಾರರಾಗಿರುವ ಜೆ.ಕೆ. ಡಾಬೂ ಹಾಗೂ ಪ್ರಭಾಸ್ ಕುಮಾರ್ ಝಾ ಈ ಸಮಿತಿಗಳ ನೇತೃತ್ವ ವಹಿಸಿದ್ದಾರೆ. ಪ್ರತಿಯೊಂದು ಸಮಿತಿಯಲ್ಲೂ ಬಹುತೇಕ ಉನ್ನತ ಅಧಿಕಾರಿಗಳು ಸೇರಿದಂತೆ ಆರು ಸದಸ್ಯರಿದ್ದಾರೆ. ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯು ಆಡಳಿತ ಪಕ್ಷದ ಬೆಂಬಲಿಗ ಸಂಘಟನೆಗಳು ಹಾಗೂ ಕೇಂದ್ರ ಸರಕಾರದ ಅಧಿಕಾರಶಾಹಿ ಮತ್ತು ಉದಾರತೆ ವಿರೋಧಿ ನೀತಿಗಳನ್ನು ವಿರೋಧಿಸುವ ವಿದ್ಯಾರ್ಥಿಗಳ ನಡುವಿನ ಕದನಕಣವಾಗಿ ಪರಿಣಮಿಸಿದೆ.
ಈ ಮಧ್ಯೆ ಅಲಿಗಢ ಮುಸ್ಲಿಂ ವಿವಿಯು ತನ್ನ ಅಲ್ಪಸಂಖ್ಯಾತ ಸ್ಥಾನಮಾನವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಸಾಹಿತ್ಯ ಅಕಾಡಮಿಯಂತೂ ಆರೆಸ್ಸೆಸ್ ಹಾಗೂ ಜಾತ್ಯತೀತವಾದಿಗಳ ನಡುವಿನ ಜಂಗೀಕುಸ್ತಿಯ ತಾಣವಾಗಿಬಿಟ್ಟಿದೆ. ಕೇಂದ್ರದ ಅಸಹಿಷ್ಣುತೆ ಧೋರಣೆಯನ್ನು ವಿರೋಧಿಸಿ ಅನೇಕ ಮಂದಿ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸರಕಾರದ ಅಧೀನ ಸಂಸ್ಥೆಗಳ ಸಮಗ್ರ ಪರಿಶೀಲನೆ ಪ್ರಸ್ತಾಪ
ಕಳೆದ ತಿಂಗಳು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ಹಾಗೂ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರನ್ನೊಳಗೊಂಡ ಕಾರ್ಯದರ್ಶಿಗಳ ಸಮಿತಿಯು ಕೇಂದ್ರ ಸರಕಾರದ ವಿವಿಧ ಸಚಿವಾಲಯದ ಅಧೀನದಲ್ಲಿ ಬರುವ ನೂರಾರು ಸಂಶೋಧನಾ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ವಿವಿಧ ಸಾಂಸ್ಕೃತಿಕ, ಕಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟಿತ್ತು. ದಕ್ಷತೆ ಹಾಗೂ ಉತ್ತರದಾಯಿತ್ವವನ್ನು ಹೆಚಿ ಸುವ ಜೊತೆಗೆ ತಪ್ಪೆಸಗುವುದನ್ನು ಮಟ್ಟ ಹಾಕುವುದೇ ಇದರ ಉದ್ದೇಶವೆಂದು ಅಧಿಕಾರಿ ಹೇಳಿದ್ದಾರೆ.
ತಮಗೆ ಸ್ವಾಯತ್ತೆ ಇರುವಾಗ ತಾವು ಯಾಕೆ ಸರಕಾರದ ನಿಯಮಗಳನ್ನು ಪಾಲಿಸಬೇಕು ಎಂದು ವಿವಿಧ ಸ್ವಾಯತ್ತ ಸಂಸ್ಥೆಗಳ ನಿರ್ದೇಶಕರು, ಅಧ್ಯಕ್ಷರಿಂದ ದೂರುಗಳು ಬಂದಿರುವುದಾಗಿ ಅವರು ಹೇಳಿದ್ದಾರೆ. ದ್ವಿಪಕ್ಷೀಯ ಮಾತುಕತೆಗಳಿಗಾಗಿ ವಿವಿಧ ಸಚಿವಾಲಯಗಳ ಅಧಿಕಾರಿಗಳು ವಿದೇಶಗಳಿಗೆ ಪ್ರವಾಸ ಕೈಗೊಳ್ಳುವಾಗ ಅವರಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಆದರೆ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಅಂತಹ ಯಾವುದೇ ನಿರ್ಬಂಧಗಳಿರುವುದಿಲ್ಲ. ಈ ಎಲ್ಲಾ ಅಂಶಗಳ ಬಗ್ಗೆ ಈಗ ಮರುಪರಿಶೀಲನೆ ನಡೆಸುವ ಅಗತ್ಯವಿದೆಯೆಂದು ಅವರು ಹೇಳಿದ್ದಾರೆ.
‘‘ಅನೇಕ ಸ್ವಾಯತ್ತ ಸಂಸ್ಥೆಗಳು ದುರ್ಬಲವೂ ಆಗಿವೆಯೆಂದು ಇನ್ನೋರ್ವ ಅಧಿಕಾರಿ ಅಭಿಪ್ರಾಯಿಸುತ್ತಾರೆ. ಮೂಲಸೌಕರ್ಯ ಹಾಗೂ ವೇತನ ನೀಡಿಕೆ ಸೇರಿದಂತೆ ಪ್ರತಿಯೊಂದಕ್ಕೂ ಸರಕಾರವನ್ನು ಅವಲಂಬಿಸದಂತೆ ಮಾಡಲು ಅವುಗಳ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ನಾವು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದೇವೆಂದು ಅವರು ಹೇಳಿದ್ದಾರೆ.







