ಕಾರ್ಮಿಕರಿಗೆ ಪರಿಹಾರ ನೀಡಲು ಆಗ್ರಹ
ಎನ್‌ಜಿಇಎಫ್ ಕಂಪೆನಿ ಬಂದ್
ಬೆಂಗಳೂರು, ಮಾ. 19: ಎನ್‌ಜಿಇಎಫ್ ಕಂಪೆನಿಯನ್ನು ಮುಚ್ಚಿ 14 ವರ್ಷಗಳು ಕಳೆದರೂ ಇಲ್ಲಿಯವರೆಗೂ ಕಂಪೆನಿಯಲ್ಲಿ ದುಡಿದ ಕಾರ್ಮಿಕರಿಗೆ ಪರಿಹಾರ ಭತ್ತೆಯನ್ನು ವಿತರಿಸಿಲ್ಲ ಎಂದು ಎನ್‌ಜಿಇಎಫ್ ಸ್ವಯಂ ನಿವೃತ್ತಿ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಗನ್ನಾಥ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದ ಇಲ್ಲಿಯವರೆಗೆ 14 ವರ್ಷಗಳು ಕಳೆದಿವೆ. ಸುಮಾರು 4 ಸಾವಿರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಹಾಗಾಗಿ ಕೂಡಲೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ನಿವೃತ್ತರಾದವರಿಗೂ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.
ಕೋರ್ಟ್‌ನಲ್ಲಿ ಕಾರ್ಮಿಕರಿಗೆ ಕೊಡಬೇಕಾದ ಪರಿಹಾರವನ್ನು ನೀಡಿದ ನಂತರ ಕಂಪೆನಿಯನ್ನು ಮುಚ್ಚುವಂತೆ ಆದೇಶ ನೀಡಿದ್ದರೂ ಸರಕಾರ ಕೋರ್ಟ್ ಆದೇಶವನ್ನು ಧಿಕ್ಕರಿಸಿದೆ. ಪರಿಹಾರಕ್ಕಾಗಿ ಹಣವನ್ನು ನೀಡಿದ್ದರೂ ವಿತರಿಸದೆ ಅದರಿಂದ ಬಡ್ಡಿಯನ್ನು ಪಡೆದು ಲಪಟಾಯಿಸಲಾಗುತ್ತಿದೆ. ಕೂಡಲೇ ಕಾರ್ಮಿಕರಿಗೆ ಪರಿಹಾರವನ್ನು ನೀಡಬೇಕು ಹಾಗೂ ಶೇ.8.5 ಬಡ್ಡಿಯನ್ನು ಸೇರಿಸಿ ನೀಡಬೇಕು ಎಂದು ಆಗ್ರಹಿಸಿದರು. 2002ರಲ್ಲಿ ಕಂಪೆನಿಯನ್ನು ಮುಚ್ಚುವ ಸಂದರ್ಭದಲ್ಲಿ ಹಲವು ಕಾರ್ಮಿಕರನ್ನು ಅಮಾನುಷವಾಗಿ ಒತ್ತಾಯ ಪೂರ್ವಕವಾಗಿ ಕೆಲಸದಿಂದ ಹೊರಹಾಕಲಾಯಿತು. ಅವರಿಗೂ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಆದುದರಿಂದ ಈ ಕೂಡಲೇ ಅವರಿಗೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಎನ್‌ಜಿಇಎಫ್ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತಿದ್ದ ಸಂಸ್ಥೆಯಾಗಿತ್ತು. ಕಂಪೆನಿಯನ್ನು ಖಾಸಗಿಯವರ ಮೂಲಕ ನಿರ್ವಹಣೆ ಮಾಡುವ ಸಾಧ್ಯತೆಗಳಿದ್ದವು. ಆದರೆ ಸರಕಾರ ಉದ್ದೇಶಪೂರ್ವಕವಾಗಿ ಮುಚ್ಚಲಾಗಿದೆ ಹಾಗೂ ಇದರ ಹಿಂದೆ ಭೂ ಕಬಳಿಕೆಯ ಹುನ್ನಾರವಿದೆಯೆಂದು ದೂರಿದರು. ಕಂಪೆನಿ ಮುಚ್ಚಲು ಕಾಂಗ್ರೆಸ್ ಸರಕಾರ ನೇರ ಹೊಣೆ ಎಂದ ಅವರು, ರಾಜಕಾರಣಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವವರನ್ನು ಉನ್ನತ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿತ್ತು. ಕಂಪೆನಿಯನ್ನು ಕೊಂಡುಕೊಳ್ಳಲು ಮಾಜಿ ಸಿಎಂ ಎಸ್.ಎಂ.ಕೃಷ್ಣರ ಅಳಿಯ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು ಎಂದು ಆರೋಪಿಸಿದರು.







