ದುಬೈ ವಿಮಾನ ರಶ್ಯದಲ್ಲಿ ಪತನ
ಎಲ್ಲ 62 ಮಂದಿ ಸಾವು: ಇಬ್ಬರು ಭಾರತೀಯರು

ಮಾಸ್ಕೊ, ಮಾ. 19: ದಕ್ಷಿಣ ರಶ್ಯದ ರೊಸ್ತೊವ್-ಆನ್-ಡಾನ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ದುಬೈಯ ವಿಮಾನವೊಂದು ಶನಿವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 62 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಭಾರತೀಯರಾಗಿದ್ದಾರೆ.
‘‘ಫ್ಲೈದುಬೈ ಕಂಪೆನಿಗೆ ಸೇರಿದ ಎಫ್‌ಝಡ್981 ವಿಮಾನ ಇಂದು ಬೆಳಗ್ಗೆ ರೊಸ್ತೊವ್-ಆನ್-ಡಾನ್ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. 33 ಮಹಿಳೆಯರು, 18 ಪುರುಷರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ವಿಮಾನದಲ್ಲಿದ್ದ 55 ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಮೃತರ ಪೈಕಿ 44 ಮಂದಿ ರಶ್ಯನ್ನರು, 8 ಯುಕ್ರೇನಿಯನ್ನರು, ಇಬ್ಬರು ಭಾರತೀಯರು ಮತ್ತು ಓರ್ವ ಉಝ್ಬೆಕಿಸ್ತಾನಿ’’ ಎಂದು ಫ್ಲೈದುಬೈ ಏರ್‌ಲೈನ್ಸ್ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪಟ್ಟಿಯಲ್ಲಿ ಭಾರತೀಯರ ಹೆಸರು ಅಂಜು ಕದೀರ್ವೆಲ್ ಅಯ್ಯಪ್ಪನ್ ಮತ್ತು ಮೋಹನ್ ಶ್ಯಾಮ್ ಎಂಬುದಾಗಿ ನಮೂದಾಗಿದೆ.
ವಿಮಾನ ಇಳಿಯುತ್ತಿದ್ದಾಗ ಪತನಗೊಂಡಿದ್ದು ಬಳಿಕ ಬೆಂಕಿ ಹೊತ್ತಿಕೊಂಡಿತು.
ಈ ಮೊದಲು ರಶ್ಯದ ಅಧಿಕಾರಿಗಳು ವಿಮಾನದಲ್ಲಿದ್ದವರ ಸಂಖ್ಯೆ 61 ಎಂದು ಹೇಳಿದ್ದರು.
‘‘ಬೋಯಿಂಗ್ 737 ವಿಮಾನವೊಂದು ಭೂಸ್ಪರ್ಶ ಮಾಡುತ್ತಿದ್ದಾಗ ಪತನಗೊಂಡಿದೆ. ವಿಮಾನದಲ್ಲಿದ್ದವರೆಲ್ಲ ಮೃತಪಟ್ಟಿದ್ದಾರೆ’’ ಎಂದು ಸ್ಥಳೀಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಟಾಸ್ ವಾರ್ತಾ ಸಂಸ್ಥೆ ವರದಿ ಮಾಡಿದೆ.
‘‘ದುಬೈಯಿಂದ ರೊಸ್ತೊವ್-ಆನ್-ಡಾನ್‌ಗೆ ತೆರಳುತ್ತಿದ್ದ ವಿಮಾನ ನೆಲಕ್ಕೆ ಅಪ್ಪಳಿಸಿದ ಬಳಿಕ ಅದಕ್ಕೆ ಬೆಂಕಿ ಹಿಡಿಯಿತು. ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು’’ ಎಂದು ಹೇಳಿಕೆ ತಿಳಿಸಿದೆ.
ಮಾಸ್ಕೊದಿಂದ ಸುಮಾರು 950 ಕಿಲೋಮೀಟರ್ ದೂರದಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಾಗ ನೆಲಕ್ಕೆ ಅಪ್ಪಳಿಸಿ ಹಲವು ಚೂರಾಯಿತು ಎಂದು ರಶ್ಯದ ಉನ್ನತ ತನಿಖಾ ಸಂಸ್ಥೆ ಇನ್‌ವೆಸ್ಟಿಗೇಟಿವ್ ಕಮಿಟಿ ವರದಿ ಮಾಡಿದೆ ಎಂದು ಟಾಸ್ ಹೇಳಿದೆ.
ಅಪಘಾತಕ್ಕೆ ಏನು ಕಾರಣ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಆದಾಗ್ಯೂ, ಅಪಘಾತದಲ್ಲಿ ಹವಾಮಾನ ಪ್ರಮುಖ ಪಾತ್ರ ವಹಿಸಿರಬಹುದು ಎಂಬುದಾಗಿ ಕೆಲವು ವರದಿಗಳು ಹೇಳಿವೆ.
ಕಳೆದ ದಶಕದಲ್ಲಿ ರಶ್ಯಕ್ಕೆ ಸೇರಿದ, ರಶ್ಯದಲ್ಲಿ ನಡೆದ ವಿಮಾನ ದುರಂತಗಳು
*ಅಕ್ಟೋಬರ್ 31, 2015- ಈಜಿಪ್ಟ್‌ನಶರ್ಮ್ ಅಲ್-ಶೇಖ್ ರಿಸಾರ್ಟ್‌ನಿಂದ ಹಾರಾಟ ನಡೆಸಿದ ಸ್ವಲ್ಪವೇ ಹೊತ್ತಿನಲ್ಲಿ ವಿಮಾನದಲ್ಲಿದ್ದ ಬಾಂಬ್ ಸಿಡಿದು ಮೆಟ್ರೊಜೆಟ್ ಏರ್‌ಲೈನರ್ ಪತನ. ಎಲ್ಲ 244 ಮಂದಿ ಸಾವು.
*ನವೆಂಬರ್ 17, 2013- ಟಾಟರ್‌ಸ್ಟನ್ ಏರ್‌ಲೈನ್ಸ್ ಬೋಯಿಂಗ್ 737 ವಿಮಾನವನ್ನು ಕಝನ್‌ನಲ್ಲಿ ಇಳಿಸಲು ಯತ್ನಿಸುತ್ತಿದ್ದಾಗ ವಿಮಾನ ಕೆಳಮುಖವಾಗಿ ಸಾಗಿ ಪತನ. ಎಲ್ಲ 50 ಪ್ರಯಾಣಿಕರ ಸಾವು.
*ಮೇ 10, 2012- ಪ್ರಾತ್ಯಕ್ಷಿಕೆ ಹಾರಾಟದಲ್ಲಿ ತೊಡಗಿದ್ದ ಸುಖೋಯ್ ಸೂಪರ್‌ಜೆಟ್ ಇಂಡೋನೇಶ್ಯದಲ್ಲಿ ಅಗ್ನಿಪರ್ವತಕ್ಕೆ ಅಪ್ಪಳಿಕೆ. ಎಲ್ಲ 45 ಮಂದಿಯ ಸಾವು.
*ಎಪ್ರಿಲ್ 2, 2012: ಟ್ಯುಮೆನ್‌ನಿಂದ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಯುಟಿಏರ್‌ನ ಎಟಿಆರ್-72 ವಿಮಾನ ಪತನ. 33 ಸಾವು, 10 ಮಂದಿ ಜೀವಂತ
*ಸೆಪ್ಟಂಬರ್ 7, 2011- ಯರಸ್ಲವ್ ಲೊಕೊಮೋಟಿವ್ ಹಾಕಿ ತಂಡವನ್ನು ಒಯ್ಯುತ್ತಿದ್ದ ಯಾಕ್-42 ವಿಮಾನ ಯರಸ್ಲವ್‌ನಿಂದ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಪತನ. ಎಲ್ಲ 44 ಪ್ರಯಾಣಿಕರು ಸಾವು.
*ಆಗಸ್ಟ್ 22, 2006- ರಶ್ಯದ ಪುಲ್ಕೊವ್ ಏರ್‌ಲೈನ್ಸ್‌ಗೆ ಸೇರಿದ ಟುಪೊಲೊವ್ ಟಿಯು-154 ವಿಮಾನ ಯುಕ್ರೇನ್‌ನಲ್ಲಿ ಪತನ. ಎಲ್ಲ 170 ಮಂದಿ ಸಾವು.
*ಜುಲೈ 9, 2006- ರಶ್ಯದ ಎಸ್7 ಕಂಪೆನಿಗೆ ಸೇರಿದ ಏರ್‌ಬಸ್ ಎ-310 ವಿಮಾನ ಸೈಬೀರಿಯದ ಇರ್‌ಕುಟ್‌ಸ್ಕ್ ನಗರದಲ್ಲಿ ರನ್‌ವೇಯಿಂದ ಜಾರಿತು ಹಾಗೂ ಬೆಂಕಿ ಹೊತ್ತಿಕೊಂಡಿತು. ಕನಿಷ್ಠ 124 ಮಂದಿಯ ಸಾವು.
*ಮೇ 3, 2006- ಆರ್ಮೇನಿಯನ್ ಏರ್‌ಲೈನ್ ಆರ್ಮೇವಿಯಕ್ಕೆ ಸೇರಿದ ಎ-320 ವಿಮಾನ ರಶ್ಯದ ರಿಸಾರ್ಟ್ ನಗರ ಸೋಚಿಯಲ್ಲಿ ಇಳಿಯಲು ಯತ್ನಿಸಿದ ವೇಳೆ ಕಪ್ಪು ಸಮುದ್ರದಲ್ಲಿ ಪತನ. ಎಲ್ಲ 113 ಮಂದಿಯ ಸಾವು.







