ಸ್ಲಂ ಅಭಿವೃದ್ಧಿಗೆ ಆಗ್ರಹಿಸಿ ನಾಳೆ ವಿಧಾನಸೌಧಕ್ಕೆ ಮುತ್ತಿಗೆ
ಬೆಂಗಳೂರು, ಮಾ.19: ಬಿಡುಗಡೆಯ ಚಿರತೆಗಳು ಕರ್ನಾಟಕ ಸಂಘಟನೆಯಿಂದ ನಗರದಲ್ಲಿರುವ ಸ್ಲಂಗಳನ್ನು ಅಭಿವೃದ್ಧಿ ಪಡಿಸಲು ಹೆಚ್ಚು ಆದ್ಯತೆಯನ್ನು ನೀಡಬೇಕು ಎಂದು ಒತ್ತಾಯಿಸಿ ಮಾ.21ರಂದು ‘ಸ್ಲಂಗಳನ್ನು ಉಳಿಸಿ ಬೆಂಗಳೂರು ಬೆಳೆಸಿ’ ಘೋಷಣೆಯೊಂದಿಗೆ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಎಂ.ಎ.ನಜೀದ್, ನಗರದಲ್ಲಿ ಸಾವಿರಾರು ಜನ ಸ್ಲಂ ನಿವಾಸಿಗಳು ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲದೆ ಬದುಕುವಂತಹ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಸರಿಯಾದ ಮೂಲಭೂತ ಸೌಲಭ್ಯಗಳನ್ನು ನೀಡಬೇಕಾದ ಸರಕಾರಗಳು ಕೇವಲ ಮತಗಳನ್ನು ಪಡೆಯಲು ಮಾತ್ರ ಸ್ಲಂಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ನಗರದಲ್ಲಿರುವ ಸ್ಲಂಗಳು ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು, ಸರಿಯಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಸ್ಲಂ ಜನರಿಗೆ ಅನುಕೂಲವಾಗುವಂತೆ ಪ್ರತ್ಯೇಕವಾದ ಸ್ಮಶಾನಗಳನ್ನು ಒದಗಿಸಬೇಕು. ಹಲವು ಸ್ಥಳಗಳಲ್ಲಿ ಸ್ಲಂ ಬಡಾವಣೆಗಳಲ್ಲಿ ವಾಸಿಸುವ ನಿವಾಸಿಗಳ ಮೇಲೆ ಬಿಡಿಎ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಮತ್ತು ತೊಂದರೆಗಳನ್ನು ತಕ್ಷಣ ನಿಲ್ಲಿಸಬೇಕು. ಸ್ಲಂಗಳನ್ನು ಅಭಿವೃದ್ಧಿಪಡಿಸಲು ಇತರೆ ಇಲಾಖೆಗಳಿಗೆ ಸರಕಾರ ನಿರ್ದೇಶನ ನೀಡಬೇಕು ಎಂಬಿತ್ಯಾದಿ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.