ನಾವುಂದ: ಮಾರಕಾಯುಧದಿಂದ ವ್ಯಕ್ತಿಯ ಕೊಲೆ

ಬೈಂದೂರು, ಮಾ.19: ನಾವುಂದ ಗ್ರಾಮದ ಪಡುವಾಯಿನ ಮನೆ ಎಂಬಲ್ಲಿ ಶುಕ್ರವಾರ ರಾತ್ರಿ ಮನೆಯಲ್ಲಿ ಒಂಟಿಯಾಗಿದ್ದ ವ್ಯಕ್ತಿಯೊಬ್ಬರನ್ನು ಮಾರಕಾಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಗೀಡಾದವರನ್ನು ಮಾಧವ ಯಾನೆ ಮಾಸ್ತಿ ಪೂಜಾರಿ (62) ಎಂದು ಗುರುತಿಸಲಾಗಿದೆ. ಮುಂಬೈಯ ಮಫತ್‌ಲಾಲ್ ಗ್ರೂಪ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇವರು, ಐದು ವರ್ಷಗಳ ಹಿಂದೆ ನಿವೃತ್ತರಾಗಿ ಅನಾರೋಗ್ಯದ ಕಾರಣ ಮುಂಬೈ ತೊರೆದು ನಾವುಂದದಲ್ಲಿರುವ ತಮ್ಮ ಮನೆಯಲ್ಲಿ ಒಬ್ಬರೇ ವಾಸ ಮಾಡಿಕೊಂಡಿದ್ದರು.
ಮೈಸೂರಿನಲ್ಲಿರುವ ಇವರ ಮಗಳು ಪ್ರಭಾವತಿ ಎಂಬವರು ಶುಕ್ರವಾರ ಮಧ್ಯಾಹ್ನ ತಂದೆಯ ಮೊಬೈಲ್‌ಗೆ ಕರೆ ಮಾಡಿ, ನಾವು ಮೈಸೂರಿನಿಂದ ನಾವುಂದಕ್ಕೆ ಬರುವುದಾಗಿ ತಿಳಿಸಿದ್ದರು. ಅದಕ್ಕಾಗಿ ಅವರು ರಾತ್ರಿ 8 ಗಂಟೆಗೆ ನಾವುಂದ ಪೇಟೆಗೆ ತೆರಳಿ ತರಕಾರಿ ತಂದಿದ್ದರು. ತನ್ನ ಕುಟುಂಬದೊಂದಿಗೆ ಶನಿವಾರ ಮುಂಜಾನೆ 5 ಗಂಟೆಗೆ ಮನೆಗೆ ಬಂದ ಪ್ರಭಾವತಿಗೆ ಮನೆಯ ಎದುರಿನ ಬಾಗಿಲು ಹಾಕಿರುವುದು ಕಂಡುಬಂತು. ಬಳಿಕ ಸ್ಥಳೀಯರಲ್ಲಿ ತಂದೆಯ ಬಗ್ಗೆ ವಿಚಾರಿಸಿದರು. ಆದರೆ ಅವರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಹಾಗಾಗಿ ಪ್ರಭಾವತಿ ಮನೆಯ ಬೀಗ ಮುರಿದು ಒಳಪ್ರವೇಶಿಸಿದಾಗ ತಂದೆ ಮನೆಯ ಅಡುಗೆ ಕೋಣೆಯ ಪಕ್ಕದ ಬಾತ್ ರೂಮ್ ಬಳಿ ಕೊಲೆಯಾಗಿ ಬಿದ್ದಿರುವುದು ಕಂಡುಬಂತು. ಮುಂಬಾಗಿಲಿನಿಂದ ಒಳನುಗ್ಗಿದ ದುಷ್ಕರ್ಮಿಗಳು ಮಾರಕಾಯುಧದಿಂದ ತಲೆಗೆ ಕಡಿದು ಕೊಲೆ ಮಾಡಿ, ಮನೆಯ ಕಪಾಟನ್ನು ತೆರೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಬಳಿಕ ಬೀಗ ಹಾಕಿ ಹೋಗಿದ್ದಾರೆ.
ಮಾಧವ ಪೂಜಾರಿಯ ಪತ್ನಿ ಗುಲಾಬಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಮುಂಬೈಯಲ್ಲಿ ವಾಸವಾಗಿದ್ದು, ಇನ್ನೊರ್ವ ಮಗಳು ಪ್ರಭಾವತಿ ಮೈಸೂರಿನಲ್ಲಿರುವ ತನ್ನ ಪತಿಯ ಮನೆಯಲ್ಲಿ ವಾಸವಾಗಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ, ಕುಂದಾಪುರ ಡಿವೈಎಸ್ಪಿ ಮಂಜುನಾಥ್ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಎಂ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಗೋಪಾಲ ಪೂಜಾರಿ ಭೇಟಿ ನೀಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







