ಅಲ್ಪಸಂಖ್ಯಾತ ಸಂಸ್ಥೆ ಶಾಲೆಗಳ ನೋಂದಣಿ ನವೀಕರಣ ಅವಧಿ ವಿಸ್ತರಣೆ: ಖಮರುಲ್

ಬೆಂಗಳೂರು, ಮಾ.19: ರಾಜ್ಯದಲ್ಲಿನ ಅಲ್ಪಸಂಖ್ಯಾತರ ಶಾಲೆಗಳ ನೋಂದಣಿ ನವೀಕರಣವನ್ನು ಇನ್ನು ಮುಂದೆ 5 ವರ್ಷಗಳಿಗೊಮ್ಮೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೌರಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಖಮರುಲ್ ಇಸ್ಲಾಮ್ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಆಯೋಗ ಹಾಗೂ ರಾಜ್ಯ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಏರ್ಪ ಡಿಸಲಾಗಿದ್ದ ‘ಪ್ರಾದೇಶಿಕ ಸಮಾವೇಶ’ ಉದ್ಫಾಟಿಸಿ ಮಾತನಾಡಿದ ಅವರು, ಪ್ರಸ್ತುತ ಶಾಲಾ ಆಡಳಿತ ಮಂಡಳಿಯು ಪ್ರತಿ ವರ್ಷವೂ ನೋಂದಣಿಯನ್ನು ನವೀಕರಿಸಿಕೊಳ್ಳಬೇಕಿತ್ತು. ಈ ಬಗ್ಗೆ ಬಹಳಷ್ಟುಆಕ್ಷೇಪಣೆಗಳೂ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದ್ದು, ಎಲ್ಲ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕು. ಕೇಂದ್ರ ಸರಕಾರದ ವಿದ್ಯಾರ್ಥಿ ವೇತನ ಯೋಜನೆಗಳ ವ್ಯಾಪ್ತಿಯಲ್ಲಿ ಬರದ ವಿದ್ಯಾರ್ಥಿಗಳಿಗೆ ಹಾಗೂ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 20ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉರ್ದು ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಾಯಕತ್ವ ಮತ್ತು ಸಾಮರ್ಥ್ಯ ವೃದ್ಧಿಸಲು ‘ಮೆಂಟರ್ಸ್’ಗಳನ್ನು ನೇಮಕ ಮಾಡಲು 13ಕೋಟಿ ರೂ.ಗಳನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಲಾಗಿದೆ ಎಂದು ಖಮರುಲ್ ಇಸ್ಲಾಮ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರ್ತಾ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ರೋಷನ್ ಬೇಗ್, ಸರ್ವಶಿಕ್ಷಣ ಅಭಿಯಾನದಡಿ ಅಲ್ಪಸಂಖ್ಯಾತ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ನೀಡುವ ಅನುದಾನವನ್ನು ಹೆಚ್ಚು ಮಾಡುವಂತೆ ಆಯೋಗವು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಹೇಳಿದರು. ಅಲ್ಪಸಂಖ್ಯಾತ ಮಕ್ಕಳಿಗೆ ಅಂಗನವಾಡಿ ಶಾಲೆಗಳಿಂದಲೇ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಆಯಾ ಭಾಷೆಯ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಅಂಗನವಾಡಿಯಿಂದ ನೇರವಾಗಿ ಈ ಮಕ್ಕಳು 1ನೆ ತರಗತಿಗೆ ಸೇರುವುದರಿಂದ ಅವರ ಶಿಕ್ಷಣಕ್ಕೆ ಸರಿಯಾದ ಅಡಿಪಾಯ ಸಿಗಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗದ ಸದಸ್ಯ ಬಲ್‌ಜಿತ್ ಸಿಂಗ್‌ಮನ್ ಮಾತನಾಡಿ, ಮಕ್ಕಳಿಗೆ ಮಾತೃಭಾಷೆಯ ಬಗ್ಗೆ ಹೆಚ್ಚು ಒತ್ತು ನೀಡಬೇಕು ಹಾಗೂ ಶಿಕ್ಷಣವನ್ನು ಮಸೀದಿ, ಚರ್ಚ್, ಗುರುದ್ವಾರ, ಮಂದಿರಗಳಲ್ಲಿಯೂ ನೀಡುವಂತಾಗಬೇಕೆಂದು ಸಲಹೆ ನೀಡಿದರು.
ಸಮಾವೇಶದಲ್ಲಿ ಆಯೋಗದ ಸದಸ್ಯ ಜಾಫರ್ ಆಗಹ್, ಆಯೋಗದ ಕಾರ್ಯದರ್ಶಿ, ರೀಟಾ ಚಟರ್ಜಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್‌ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







