ರಾಷ್ಟ್ರಗೀತೆ ಹಾಡಲು ಬಿಗ್ ಬಿ ನಯಾ ಪೈಸೆ ತೆಗೆದುಕೊಂಡಿಲ್ಲ
ವದಂತಿಗಳಿಗೆ ತೆರೆ ಎಳೆದ ಸೌರವ್ ಗಂಗೂಲಿ ಸ್ಪಷ್ಟನೆ

ಕೊಲ್ಕತ್ತಾ, ಮಾ. 20: ಶನಿವಾರ ಈಡನ್ ಗಾರ್ಡನ್ ನಲ್ಲಿ ಭಾರತ - ಪಾಕಿಸ್ತಾನ ಪಂದ್ಯಕ್ಕೂ ಮೊದಲು ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಸುಶ್ರಾವ್ಯವಾಗಿ ಹಾಡಿದ ರಾಷ್ಟ್ರ ಗೀತೆ ಎಲ್ಲಾ ಭಾರತೀಯರ ಮನಸೂರೆಗೊಂಡಿತ್ತು. ಆದರೆ ರಾಷ್ಟ್ರಗೀತೆ ಹಾಡಲು ಅಮಿತಾಭ್ 4 ಕೋಟಿ ರೂ. ಸಂಭಾವಣೆ ಪಡೆದಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು.
ನಟನೊಬ್ಬ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಭಾವಣೆ ತೆಗೆದುಕೊಳ್ಳುವುದು ಸಾಮಾನ್ಯವೇ ಆಗಿದ್ದರೂ, ಬಿಗ್ ಬಿ ರಾಷ್ಟ್ರ ಗೀತೆ ಹಾಡಲು ಇಷ್ಟು ದೊಡ್ಡ ಮೊತ್ತದ ಸಂಭಾವಣೆ ಪಡೆದರು ಎಂಬುದು ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಯಿತು.
ನಟರಿಗೆ ದೇಶ ಭಕ್ತಿಯೂ ನಟನೆಯೇ ಆಗಿದೆಯೇ ಎಂಬ ಪ್ರಶ್ನೆ ಕೇಳಿ ಬಂತು.
ಆದರೆ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ನ ಅಧ್ಯಕ್ಷ ಸೌರವ್ ಗಂಗೂಲಿ ಈ ಎಲ್ಲಾ ವದಂತಿಗಳಿಗೆ ಮಂಗಳ ಹಾಡಿದ್ದಾರೆ. ರಾಷ್ಟ್ರ ಗೀತೆ ಹಾಡಲು ಬಿಗ್ ಬಿ ನಯಾ ಪೈಸೆ ಶುಲ್ಕ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆನಂದ ಬಝಾರ್ ಪತ್ರಿಕಾಯೊಂದಿಗೆ ಮಾತನಾಡಿದ ಗಂಗೂಲಿ " ಬಚ್ಚನ್ ರಂತಹ ವಿಶೇಷ ವ್ಯಕ್ತಿ ಅತ್ಯಪರೂಪ. ನಾನು ಅವರಿಗೆ ಚಿರಋಣಿಯಾಗಿದ್ದೇನೆ. ಕಾರ್ಯಕ್ರಮವೊಂದಕ್ಕೆ ಯಾರಾದರು ಸ್ವತಃ 30 ಲಕ್ಷ ರೂ. ಖರ್ಚು ಮಾಡಿ ಬರುವುದನ್ನು ನೀವು ಊಹಿಸಲು ಸಾಧ್ಯವಿದೆಯೇ ? ತಮ್ಮ ವಿಮಾನ ಪ್ರಯಾಣದ ವೆಚ್ಚ ಹಾಗೂ ಹೊಟೇಲ್ ಬಿಲ್ ಗಳನ್ನು ಕೂಡ ಅವರೇ ಭರಿಸಿದ್ದಾರೆ. ಸ್ವಲ್ವವಾದರೂ ಹಣ ತೆಗೆದುಕೊಳ್ಳಿ ಎಂದು ನಾನು ಅವರಲ್ಲಿ ಅಕ್ಷರಶ ಬೇಡಿಕೊಂಡೆ. ಆದರೆ ಇದನ್ನು ನಾನು ಪ್ರೀತಿಯಿಂದ ಮಾಡುತ್ತಿದ್ದೇನೆ ಇಲ್ಲಿ ಹಣದ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು." ಎಂದು ಗಂಗೂಲಿ ಸ್ಪಷ್ಟ ಪಡಿಸಿದ್ದಾರೆ.
ಕಾರ್ಯಕ್ರಮಕ್ಕೆ ಮೊದಲು ಮಳೆಯಿಂದಾಗಿ ಹವಾಮಾನ ಚೆನ್ನಾಗಿಲ್ಲದಿದ್ದರೂ ಅಮಿತಾಭ್ ಬಚ್ಚನ್ ತಮ್ಮ ಹಾಡಿನ ತಾಲೀಮ್ ನಡೆಸಲೇಬೇಕೆಂದು ಪಟ್ಟು ಹಿಡಿದರು. ರಾಷ್ಟ್ರ ಗೀತೆ ಹಾಡುವ ಮೊದಲು ಸಂಪೂರ್ಣ ಅದರ ತಯಾರಿಯಲ್ಲಿ ಮಗ್ನರಾಗಿದ್ದ ಅವರು ಹೆಚ್ಚು ಮಾತನ್ನೂ ಹಾಡುತ್ತಿರಲಿಲ್ಲ.







