ಗುರುಬಸದಿ ಧಾಮಸಂಪ್ರೋಕ್ಷಣಾ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಮೂಡುಬಿದಿರೆ : 1008 ಪಾರ್ಶ್ವನಾಥ ಸ್ವಾಮಿ ಜಿನಬಿಂಬ ಶುದ್ಧಿ ಜೀರ್ಣೋದ್ಧಾರ ಪ್ರತಿಷ್ಠೆ ಹಾಗೂ ಧಾಮಸಂಪ್ರೋಕ್ಷಣ ಮಹೋತ್ಸವ ಅರಂಭಗೊಂಡಿದ್ದು, ಈ ಪ್ರಯುಕ್ತ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೊಲ್ಹಾಪುರ ದಿಗಂಬರ ಜೈನಮಠ ಜಗದ್ಗುರು ಸ್ವಸ್ತಿಶ್ರೀ ಲಕ್ಷ್ಮೀ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಶನಿವಾರ ರಾತ್ರಿ ಚಾಲನೆ ನೀಡಿದರು.
ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಾಂದಿಣಿ ದಿಗಂಬರ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಜೀರ್ಣೋದ್ಧಾರ ಫಲಕವನ್ನು ಅನಾವರಣಗೊಳಿಸಿದರು. ಕಂಬದಹಳ್ಳಿ ದಿಗಂಬರಮಠದ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಲಕ್ಕವಳ್ಳಿ ಮಠದ ಸ್ವಸ್ತಿಶ್ರೀ ವೃಷಭಸೇನ ಕ್ಷುಲಕ ಮಹಾರಾಜರು ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಯುವಜನಸೇವೆ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಮೂಡುಬಿದಿರೆ ಜೈನಮಠದ ನೇತೃತ್ವ ವಹಿಸಿದ ನಂತರ ಚುರುಕಿನಿಂದ ಕೆಲಸ ಮಾಡಿದ್ದಾರೆ. ಸ್ವಾಮೀಜಿಯವರ ಮುಂದಾಲೋಚನೆಯಿಂದ ಜೈನಮಠ ಹಾಗೂ ಬಸದಿಗಳ ಅಭಿವೃದ್ಧಿಯಾಗಿದೆ. ಶ್ರಾವಕ, ಶ್ರಾವಕಿಯರಿಗೆ ಪ್ರೇರಣಶಕ್ತಿಯಾಗಿ ಸ್ವಾಮೀಜಿ ಕೆಲಸ ಮಾಡುತ್ತಿದ್ದು, ಜೈನ ಸಮುದಾಯದ ಏಳಿಗೆಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ದೇಶದಲ್ಲೇ ಮೂಡುಬಿದಿರೆ ಜೈನಕಾಶಿಯಾಗಿ, ಹಲವಾರು ವೈಶಿಷ್ಟ್ಯದಿಂದ ಜೈನರ ಪವಿತ್ರ ಕ್ಷೇತವಾಗಿದೆ ಎಂದರು.
ಮಧ್ಯಪ್ರದೇಶ ಉಜ್ಜೈನಿಯ ಡಾ.ಸವಿತಾ ಜೈನ್ ಧಾರ್ಮಿಕ ಉಪನ್ಯಾಸ ನೀಡಿದರು.
ಮಂಗಳೂರಿನ ಗಣೇಶ್ ಪ್ರಸಾದ್ ಕಾವ್ಯವಾಚನ ಮಾಡಿದರು. ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಆನಡ್ಕ, ಜೈನ ಮುಖಂಡ ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು.
ವಕೀಲ ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಮೂಡುಬಿದರೆ ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಡಾ.ಎಸ್.ಪಿ ವಿದ್ಯಾಕುಮಾರ್ ಗೌರವ ಪತ್ರವಾಚಿಸಿದರು.







