ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಬೆಳ್ಳಿ ಹಬ್ಬ ಸಂಭ್ರಮ
ಸರ್ಕಾರ ನಮ್ಮನ್ನು ನೌಕರರನ್ನಾಗಿ ಪರಿಗಣಿಸಲಿ ಇಲ್ಲವೇ ಮದ್ಯಾಹ್ನದ ಬಳಿಕ ಬಿಡುವು ನೀಡಲಿ-ಜಯಲಕ್ಷ್ಮೀ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರ್ಕಾರವು ಇಲಾಖೆಯ ಮೂಲಕ ಹೆಚ್ಚು ದುಡಿಮೆ ಮಾಡಿಸುತ್ತಿದ್ದು, ಕಡಿಮೆ ವೇತನ ನೀಡುತ್ತಿದೆ. ನಮಗೆ ಹೆಚ್ಚು ದುಡಿಮೆ ನೀಡಲಿ ಆದರೆ ಅದಕ್ಕೆ ತಕ್ಕಂತೆ ಪ್ರತಿಫಲವನ್ನೂ ನೀಡಲಿ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ರಾಜ್ಯ ಅಧ್ಯಕ್ಷೆ ಜಯಲಕ್ಷ್ಮೀ ಹೇಳಿದರು.
ಅವರು ಭಾನುವಾರ ಪುತ್ತೂರಿನ ಪುರಭವನದಲ್ಲಿ ನಡೆದ ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಬೆಳ್ಳಿ ಹಬ್ಬ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 25 ವರ್ಷಗಳಿಂದ ಸಂಘವು ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಈಡೇರಿಸಿಕೊಂಡಿದೆ. ಇದಕ್ಕೆಲ್ಲಾ ಸಂಘಟಿತ ಪ್ರಯತ್ನವೇ ಕಾರಣವಾಗಿದ್ದು, ಸಂಘಕ್ಕೆ ಸರ್ವ ಪರಿಹಾರ ಕಂಡುಕೊಳ್ಳುವ ಶಕ್ತಿಯಿದೆ ಎಂದರು. ಅಂಗನವಾಡಿ ಮೂಲಕ ಮಕ್ಕಳ ಮತ್ತು ಮಹಿಳೆಯ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿರುವುದು ನಮಗೆ ಸಿಕ್ಕಿರುವ ಉತ್ತಮ ಯೋಜನೆ ಆದರೆ ಅದಕ್ಕೆ ತಕ್ಕಂತೆ ಸಂಭಾವನೆ ನೀಡುವಲ್ಲಿ ಸರ್ಕಾರದ ಯೋಚನೆ ಸರಿಯಾಗಿಲ್ಲ ಎಂದ ಅವರು ಈ ಬಾರಿಯ ಬಜೆಟ್‌ನಲ್ಲಿ ನಮಗೆ ಸಂಭಾವನೆ ಹೆಚ್ಚು ಮಾಡುವ ಭರವಸೆ ನೀಡಲಾಗಿತ್ತು. ಈ ಬಗ್ಗೆ ನಾವು ಆಶಾವಾದಿಗಳಾಗಿದ್ದೆವು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲದ ಕಾರಣ ನಮ್ಮ ಆಶಾವಾದ ಹುಸಿಯಾಗಿದೆ ಎಂದು ಹೇಳಿದರು. ಸರ್ಕಾರವು ನಮಗೆ ಇದೀಗ ಸಂಜೆಯ ತನಕ ಕಾರ್ಯನಿರ್ವಹಿಸಲು ಅದೇಶ ನೀಡಿದ್ದು, ನಮಗೂ ಬದುಕು ಮತ್ತು ಕುಟುಂಬ ಜೀವನವಿದೆ. ನಮ್ಮನ್ನು ದಿನಪೂರ್ತಿ ದುಡಿಸುವ ಸರ್ಕಾರ ಸರ್ಕಾರದ ನೌಕರನ್ನಾಗಿ ಪರಿಗಣಿಸಲಿ ಇಲ್ಲವೇ ನಮಗೆ ಮದ್ಯಾಹ್ನದ ಬಳಿಕ ಬಿಡುವು ನೀಡಲಿ ಎಂದು ಅವರು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಹಕಾರಿ ಸಂಘವನ್ನು ಕಳೆದ 3 ತಿಂಗಳ ಹಿಂದೆ ಆರಂಭಿಸಲಾಗಿದ್ದು, ಸಂಘವು ಲಾಭದಾಯಕವಾಗಿ ಮುಂದುವರಿಯುತ್ತಿದೆ ಎಂದ ಅವರು ಸಹಕಾರಿ ಸಂಘದ ಮೂಲಕ ವಿದ್ಯಾನಿಧಿ ಯೋಜನೆಯನ್ನು ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರು, ತಾಲೂಕು ಸಂಘದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರುಗಳು, ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ವಲಯದ ಉತ್ತಮ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯನ್ನು ಗುರುತಿಸಿ ಗೌರವಿಸಲಾಯಿತು. ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ವಿಶಾಲಾಕ್ಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಾವತಿ, ತಾಲೂಕು ಉಪಾಧ್ಯಕ್ಷರಾದ ರಾಜರಾಜೇಶ್ವರಿ, ಶೋಭಾ, ಕಾರ್ಯದರ್ಶಿ ಪುಷ್ಪಾವತಿ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಕಾರ್ಯದರ್ಶಿ ಜಯಲತಾ ಸ್ವಾಗತಿಸಿದರು. ಸದಸ್ಯರಾದ ಶ್ರೀಲತಾ ಮತ್ತು ಅರುಣಾ ಡಿ ಕಾರ್ಯಕ್ರಮ ನಿರೂಪಿಸಿದರು.







