ಪಾಕಿಸ್ತಾನದಲ್ಲಿ ಟಿವಿ ಸೆಟ್‌ಗಳು ಪುಡಿಪುಡಿ ಅಫ್ರಿದಿ ವಿರುದ್ಧ ಮಾಜಿ ಆಟಗಾರರ ಆಕ್ರೋಶ
ಭಾರತ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಸೋಲು

ಕರಾಚಿ, ಮಾ.20 ಭಾರತ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಪಾಕ್‌ನ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಕೆಲವು ಅಭಿಮಾನಿಗಳು ಪಾಕ್ ಸೋತ ಬೆನ್ನೆಲ್ಲೆ ಸಿಟ್ಟಿನಿಂದ ಟಿವಿ ಸೆಟ್‌ನ್ನು ಪುಡಿಪುಡಿ ಮಾಡಿದ್ದಾರೆ.
ಇದೇ ವೇಳೆ ನಾಯಕ ಶಾಹಿದ್ ಅಫ್ರಿದಿ ವಿರುದ್ಧ ಮಾಜಿ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂತ್ರಗಾರಿಕೆಯಲ್ಲಿ ಅವರೊಬ್ಬ ದುರ್ಬಲ ನಾಯಕ ಎಂದು ಮಾಜಿ ಆಟಗಾರರು ಬಣ್ಣಿಸಿದ್ದಾರೆ.
ಶಾಹಿದ್ ಅಫ್ರಿದಿ ಭಾರತದ ವಿರುದ್ಧ ಸೋಲಿನ ಕಾರಣಕ್ಕಾಗಿ ನಾಯಕತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಭಾರತದ ವಿರುದ್ಧ ಐಸಿಸಿಯ ಮೇಜರ್ ಇವೆಂಟ್‌ಗಳಲ್ಲಿ ಗೆಲ್ಲದ ತಂಡವೆಂಬ ಹಣೆಪಟ್ಟಿಯನ್ನು ಪಾಕಿಸ್ತಾನ ಕಟ್ಟಿಕೊಂಡಿದೆ. ಪಾಕಿಸ್ತಾನ ತಂಡ
ಸೋಲು ಅನುಭವಿಸುತ್ತಿದ್ದಂತೆ ಪಾಕ್‌ನ ಅಭಿಮಾನಿಗಳು ಬೀದಿಗಳಿದು ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ನಾಯಕ ಅಫ್ರಿದಿ ಅವರು ಸ್ಪಿನ್ನರ್ ಇಮಾದ್ ವಸೀಮ್ ಅವರನ್ನು ಅಂತಿಮ 11ರ ಬಳಗದಲ್ಲಿ ಸೇರಿಸಿಕೊಳ್ಳದೆ ಇರುವುದು ಮತ್ತು ಒನ್ ಡೌನ್ ದಾಂಡಿಗನಾಗಿ ಅಫ್ರಿದಿ ಕ್ರೀಸ್‌ಗೆ ಆಗಮಿಸಿ 14 ಎಸೆತಗಳಲ್ಲಿ 8 ರನ್ ಗಳಿಸಿ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೋಪಗೊಂಡಿದ್ದಾರೆ. ಮಾಜಿ ಆಟಗಾರರು ಅಫ್ರಿದಿ ನಿರ್ಧಾರವನ್ನು ಟೀಕಿಸಿದ್ದಾರೆ.
ಪಾಕಿಸ್ತಾನ ಸೋಲಿನ ವಿಚಾರದಲ್ಲಿ ಪಾಕ್‌ನ ಮಾಜಿ ಆಟಗಾರರು ಪ್ರತಿಕ್ರಿಯೆ ನೀಡಿರುವಂತೆ ವಿಶ್ವದ ವಿವಿಧ ದೇಶಗಳ ಹಲವು ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್ ಗ್ರೇಟ್ ಬ್ರಿಯಾನ್ ಲಾರಾ ಅವರು ತಜ್ಞ ಸ್ಪಿನ್ನರ್ ಇಮಾದ್ ವಸೀಮ್‌ರನ್ನು ಹೊರಗಿಟ್ಟ ವಿಚಾರದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಫ್ರಿದಿ ನಿಲುವನ್ನು ಲಾರಾ, ಪಾಕ್‌ನ ಮಾಜಿ ನಾಯಕ ರಶೀದ್ ಲತೀಫ್ , ಮಾಜಿ ಸ್ಪಿನ್ನರ್ ಸಕ್ಲೈನ್ ಮುಶ್ತಾಕ್ ಪ್ರಶ್ನಿಸಿದ್ದಾರೆ.





