ಭಾರತೀಯ ಕಂಪೆನಿಯ ಟಿಬಿ ಔಷಧಿಗೆ ಡಬ್ಲುಎಚ್‌ಓ ಮಾನ್ಯತೆ ರದ್ದು

ಲಂಡನ್, ಮಾ.18: ಭಾರತದ ಸ್ವಿಝೆರಾ ಲ್ಯಾಬ್ಸ್ ಸಂಸ್ಥೆಯು ಉತ್ಪಾದಿಸುವ ಟಿಬಿ ಔಷಧಿಗೆ ತಾನು ನೀಡಿದ್ದ ಅನುಮೋದನೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ) ತಕ್ಷಣದಿಂದಲೇ ರದ್ದುಪಡಿಸಿದೆ. ಔಷಧದ ಗುಣಮಟ್ಟದ ಬಗ್ಗೆ ನಡೆಸಲಾದ ತನಿಖೆಯ ಆಧಾರದಲ್ಲಿ ಅನುಮೋದನೆಯನ್ನು ರದ್ದುಪಡಿಸಿರುವುದಾಗಿ ಅದು ಹೇಳಿದೆ.
ಸ್ವಿಝೆರಾದ ಮುಂಬೈ ಘಟಕದಲ್ಲಿ ತಯಾರಿಸಲಾದ ಎಲ್ಲಾ ಟಿಬಿ ಔಷಧಿ ಉತ್ಪನ್ನಗಳನ್ನು ತಾನು ಅಮಾನತುಗೊಳಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆೆ ತಿಳಿಸಿದೆ. ಉತ್ಪನ್ನಗಳ ಗುಣಮಟ್ಟವು ಅವಿಶ್ವಸನೀಯವೆಂಬ ಕಾರಣಕ್ಕಾಗಿ ಅದನ್ನು ಅಮಾನತುಗೊಳಿಸಿರುವುದಗಿ ಅದು ಹೇಳಿದೆ.
ಈಗಾಗಲೇ ಮಾರುಕಟ್ಟೆಯಲ್ಲಿರುವ ಈ ಕಂಪೆನಿಯ ಟಿಬಿ ಔಷಧಿಗಳ ಬಗ್ಗೆ ತಜ್ಞರಿಂದ ಸ್ವತಂತ್ರವಾದ ತನಿಖೆ ನಡೆಯಬೇಕೆಂದು ಡಬ್ಲೆುಎಚ್‌ಓ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಈ ನಡೆಯು ಭಾರತದ ಫಾರ್ಮಾಸ್ಯೂಟಿಕಲ್ ಉದ್ಯಮಕ್ಕೆ ಆಗಿರುವ ಭಾರೀ ದೊಡ್ಡ ಹೊಡೆತವೆಂದೇ ಭಾವಿಸಲಾಗಿದೆ. ಜಗತ್ತಿನಾದ್ಯಂತ ಅಗ್ಗದ ದರದ ಜೆನೆರಿಕ್ ಔಷಧಿಗಳನ್ನು ಭಾರತ ಪೂರೈಕೆ ಮಾಡುತ್ತಿದ್ದು,ಅದು ಇತ್ತೀಚಿನ ವರ್ಷಗಳಲ್ಲಿ ತನ್ನ ಉತ್ಪನ್ನಗಳ ಗುಣಮಟ್ಟದ ಬಗ್ಗೆ ವಿವಾದಗಳನ್ನು ಎದುರಿಸುತ್ತಿದೆ.
ಸ್ವಿಝೆರಾ ಲ್ಯಾಬ್ಸ್ ಕಂಪೆನಿಯ ಮುಂಬೈನ ಔಷಧಿ ಉತ್ಪಾದನಾ ಘಟಕದಲ್ಲಿ ಧೂಳು ಹಾಗೂ ಕಸ ಕಂಡುಬಂದಿದ್ದು, ನೈರ್ಮಲ್ಯದ ಗುಣಮಟ್ಟವೂ ಕಳಪೆಯಾಗಿದೆಯೆಂದು ಡಬ್ಯುಎಚ್‌ಓ ವರದಿ ಹೇಳಿದೆ. ದಾಖಲೆಗಳ ನಿರ್ವಹಣೆಯೂ ಅಸಮರ್ಪಕವಾಗಿದೆಯೆಂದು ಆರೋಪಿಸಿ ಡಬ್ಲುಎಚ್‌ಓ ಇತ್ತೀಚೆಗೆ ಮಾಲಕ ಸಂಸ್ಥೆಯಾದ ಮನೀಶ್ ಫಾರ್ಮಾಸ್ಯೂಟಿಕಲ್ಸ್‌ಗೆ ನೋಟಿಸ್ ಜಾರಿಗೊಳಿಸಿತ್ತು.







