ಪ್ರೀತಿಸುವಂತೆ ಪೀಡನೆ: ಬಾಲಕಿಯ ಆತ್ಮಹತ್ಯೆ
ಬೆಂಗಳೂರು, ಮಾ. 20: ಬಾಲಕಿಗೆ ಯುವಕನೋರ್ವ ಪ್ರೀತಿಸುವಂತೆ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಬಾಲಕಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಇಲ್ಲಿನ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾಗಿರುವ ಬಾಲಕಿಯನ್ನು ಜಗಜೀವನ ರಾಂ ನಗರ(ಜೆ.ಜೆ) ಕಾಲನಿಯ ನಿವಾಸಿ ಸೌಂದರ್ಯಾ(15) ಎಂದು ಗುರುತಿಸಲಾಗಿದೆ. ಬಾಲಕಿಗೆ ಅದೇ ಕಾಲನಿಯಲ್ಲಿರುವ ಪ್ರವೀಣ್ ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ.
ಮಾ.17ರಂದು ಸೌಂದರ್ಯ ಶಾಲೆಗೆ ಹೋಗುವ ದಾರಿಯಲ್ಲಿ ನನ್ನನ್ನು ಪ್ರೀತಿಸದಿದ್ದರೆ ಆ್ಯಸಿಡ್ ಹಾಕುವುದಾಗಿ ಬೆದರಿಸಿದ್ದ. ಆ ಹಿನ್ನೆಲೆಯಲ್ಲಿ ಬೇಸತ್ತ ಸೌಂದರ್ಯಾ ಶಾಲೆಯಿಂದ ಮನೆಗೆ ಹಿಂದಿರುಗಿದ್ದು, ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಗೊತ್ತಾಗಿದೆ.
ತೀವ್ರ ಸುಟ್ಟಗಾಯಗಳಿಂದ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಬಾಲಕಿ ಸೌಂದರ್ಯ ಸಾವಿಗೆ ಯುವಕ ಪ್ರವೀಣ್ ಕಿರುಕುಳವೇ ಮೂಲ ಕಾರಣ ಎಂದು ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.





