ಇಬ್ಬರು ಸಾವು, ಐದು ಮಂದಿಗೆ ತೀವ್ರ ಗಾಯ
ಮಂಡ್ಯ: ಎತ್ತಿನಗಾಡಿ, ಟೆಂಪೋಗೆ ಬಸ್ ಢಿಕ್ಕಿ

ಮಂಡ್ಯ, ಮಾ.20: ಚಾಲಕನ ಅಜಾಗರೂಕತೆಯಿಂದ ಖಾಸಗಿ ಬಸ್ಸೊಂದು ಎತ್ತಿನಗಾಡಿ ಹಾಗೂ ಗೂಡ್ಸ್ ಟೆಂಪೋಗೆ ಢಿಕ್ಕಿ ಹೊಡೆದು ಇಬ್ಬರು ವ್ಯಕ್ತಿಗಳು ಹಾಗೂ ಒಂದು ಎತ್ತು ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕು ತಳಗವಾದಿ ಗೇಟ್ ಬಳಿ ರವಿವಾರ ಮುಂಜಾನೆ ಸಂಭವಿಸಿದೆ.
ಎತ್ತಿನಗಾಡಿ ಓಡಿಸುತ್ತಿದ್ದ ತಳಗವಾದಿ ಗ್ರಾಮದ ಬೋರೇಗೌಡರ ಪುತ್ರ ಸಿದ್ದೇಗೌಡ (40) ಹಾಗೂ ಟೆಂಪೋ ಚಾಲಕ ಮದ್ದೂರು ತಾಲೂಕಿನ ಸೋಂಪುರ ಗ್ರಾಮದ ವಿನೋದ್ (35) ಸಾವನ್ನಪ್ಪಿದವರು.
ಎತ್ತಿನಗಾಡಿಯಲ್ಲಿದ್ದ ತಳಗವಾದಿ ಗ್ರಾಮದ ಹನುಮಂತು, ಮಹೇಂದ್ರ, ಟೆಂಪೋದಲ್ಲಿದ್ದ ಮದ್ದೂರು ತಾಲೂಕಿನ ಉಪ್ಪಾರದೊಡ್ಡಿಯ ಮಹದೇವ, ಕುಮಾರ, ಕಿರಂಗಂದೂರು ಗ್ರಾಮದ ಶಿವರಾಮು ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತದಲ್ಲಿ ಎತ್ತಿನಗಾಡಿಯ ಎರಡು ಎತ್ತುಗಳಲ್ಲಿ ಒಂದು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಂದು ಎತ್ತಿನ ಕಾಲು, ಎರಡು ಕೊಂಬು ಮುರಿದು ಸಾವು ಬದುಕಿನ ನಡುವೆ ನರಳುತ್ತಿದೆ.
ಘಟನೆ ಹಿನ್ನೆಲೆ: ಮಳವಳ್ಳಿ ತಾಲೂಕಿನ ತಳಗವಾದಿ ಗೇಟ್ ಬಳಿ ಎತ್ತಿನ ಗಾಡಿಯೊಂದಕ್ಕೆ ಕಬ್ಬು ತುಂಬುತ್ತಿದ್ದಾಗ ಮಳವಳ್ಳಿ ಕಡೆಯಿಂದ ಅತಿ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಹಿಂದಿನಿಂದ ಢಿಕ್ಕಿ ಹೊಡೆದ ರಭಸಕ್ಕೆ ಎತ್ತು ಮತ್ತು ಗಾಡಿ ಹಾಗೂ ಗಾಡಿಯಲ್ಲಿದ್ದ ರೈತ ಸಿದ್ದೆಗೌಡ, ಹನುಮಂತು ಸುಮಾರು 20 ಮೀಟರ್ ದೂರ ಹೋಗಿ ಬಿದ್ದಿದ್ದಾರೆ. ಅದರಲ್ಲಿ ಸಿದ್ದೆಗೌಡ ಮತ್ತು ಒಂದು ಎತ್ತು ಮೃತಪಟ್ಟಿತು.
ಅನಂತರ, ಅದೇ ಬಸ್ ಮದ್ದೂರು ಕಡೆಯಿಂದ ಮಳವಳ್ಳಿ ಕಡೆಗೆ ಬರುತ್ತಿದ್ದ ಬಾಳೆಮಂಡಿಗೆ ಸೇರಿದ ಟೆಂಪೋವೊಂದಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ಟೆಂಪೋ ಮುಂಭಾಗ ಸಂಪೂರ್ಣ ಜಖಂಗೊಂಡು ಸುಮಾರು 15 ಮೀಟರ್ ದೂರ ಹೋಗಿ ಬಿದ್ದಿದೆ. ಅದರಲ್ಲಿದ್ದ ಚಾಲಕ ವಿನೋದ್ ಸಾವನ್ನಪ್ಪಿದ್ದು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ರಿಕ್ತ ಜನರಿಂದ ರಸ್ತೆ ತಡೆ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಜನರು ಸ್ಥಳಕ್ಕೆ ಬಂದು ರಸ್ತೆತಡೆ ನಡೆಸಿ ಬಸ್ಸಿನ ಚಾಲಕನ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಮೃತರ ಕುಟುಂಬದವರಿಗೆ ಬಸ್ ಮಾಲಕರಿಂದ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು, ಶಾಸಕರು ಬರುವವರೆಗೂ ಶವ ಎತ್ತುವುದಿಲ್ಲವೆಂದು ಪಟ್ಟು ಹಿಡಿದ ಜನರು ಮತ್ತು ಮೃತ ಕುಟುಂಬದವರನ್ನು ಡಿವೈಎಸ್ಪಿ ಆರ್.ಶಿವಕುಮಾರ್ ಮನವೊಲಿಸಿ ಶವಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾದರು. ಆದರೆ, ಅಪಘಾತ ನಡೆದ ಸ್ಥಳದಲ್ಲಿ ಮಧ್ಯಾಹ್ನದವರೆಗೂ ಗಾಯಗೊಂಡ ಎತ್ತು ನರಳಾಡುತ್ತಿರುವ ದೃಶ್ಯ ಮನಕಲಕುವಂತಿತ್ತು.
ಸ್ಥಳಕ್ಕೆ ತಹಶೀಲ್ದಾರ್ ಎಂ.ಎಲ್.ಶಿವಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕೆಯಾಗಿ ಕೆ.ಎಂ.ದೊಡ್ಡಿ, ಮಳವಳ್ಳಿ ಗ್ರಾಮಾಂತರ ಹಾಗೂ ಪುರ ಪೊಲೀಸ್ ಠಾಣೆಯ ಪೊಲೀಸರು ಮತ್ತು ಜಿಲ್ಲಾ ಸಶಸ್ತ್ರ ಪಡೆಯ ಪೊಲೀಸರನ್ನು ಕರೆಸಿ ಕೊಳ್ಳಲಾಗಿತ್ತು. ಬಸ್ ಚಾಲಕ ಪರಾರಿಯಾಗಿದ್ದು, ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.





