ನಕಲಿ ಪಾನ್ ಕಾರ್ಡ್ ಪತ್ತೆಗೆ ನೂತನ ತಂತ್ರಜ್ಞಾನ

ಹೊಸದಿಲ್ಲಿ,ಮಾ.20: ವರ್ಷಗಳ ಶ್ರಮದ ಬಳಿಕ ಆದಾಯ ತೆರಿಗೆ ಇಲಾಖೆಯು ಕೊನೆಗೂ ನಕಲಿ ಪಾನ್‌ಕಾರ್ಡ್ ಹಾವಳಿಯನ್ನು ತಡೆಗಟ್ಟಲು ನೂತನ ತಂತ್ರಜ್ಞಾನವೊಂದನ್ನು ಕಂಡುಕೊಂಡಿದೆ. ಈ ತಂತ್ರಜ್ಞಾನದಿಂದಾಗಿ ನಕಲಿ ಪಾನ್ ಕಾರ್ಡ್‌ನ್ನು ನಿಷ್ಕ್ರಿಯಗೊಳಿಸಬಹುದಾಗಿದೆ.
ಇನ್‌ಕಮ್ ಟ್ಯಾಕ್ಸ್ ಬಿಸಿನೆಸ್ ಅಪ್ಲಿಕೇಷನ್-ಪಾನ್ ಎಂಬ ನೂತನ ವಿದ್ಯುನ್ಮಾನ ವೇದಿಕೆಯನ್ನು ಇಲಾಖೆಯು ಕಾರ್ಯಾರಂಭಗೊಳಿಸಿದ್ದು, ಪ್ರತಿ ಬಾರಿಯೂ ಪಾನ್ ಕಾರ್ಡ್‌ಗಾಗಿ ಹೊಸ ಅರ್ಜಿ ಬಂದಾಗ ಇಂತಹ ನಕಲಿ ಪಾನ್ ಸಂಖ್ಯೆಗಳನ್ನು ಪತ್ತೆ ಹಚ್ಚಲು ತೆರಿಗೆ ಅಧಿಕಾರಿಗಳು ಮತ್ತು ಪಾನ್ ಕಾರ್ಡ್‌ಗಳನ್ನು ವಿತರಿಸುವ ಮಧ್ಯವರ್ತಿ ಸಂಸ್ಥೆಗಳಿಗೆ ಇದು ನೆರವಾಗಲಿದೆ.
ನಕಲಿ ಪಾನ್ ಪಿಡುಗನ್ನು ತಡೆಯಲು ಇಲಾಖೆಯಲ್ಲಿ ಈ ಮೊದಲು ದೈಹಿಕ ಶ್ರಮದ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು. ಆದರೆ ಅದು ದೋಷಪೂರ್ಣವಾಗಿತ್ತು. ಆದರೆ ನೂತನ ವಿದ್ಯುನ್ಮಾನ ವ್ಯವಸ್ಥೆಯು ಅತ್ಯಂತ ನಿಖರವಾಗಿದೆ ಎಂದು ಹೇಳಿದ ಹಿರಿಯ ಅಧಿಕಾರಿಯೋರ್ವರು, ಆದರೆ ಹಳೆಯ ಪಾನ್ ಕಾರ್ಡ್‌ಗಳ ಪ್ರಕರಣಗಳಲ್ಲಿ ದೈಹಿಕ ಶ್ರಮದ ವ್ಯವಸ್ಥೆ ಮುಂದುವರಿಯಲಿದೆ. ಹಳೆಯ ವ್ಯವಸ್ಥೆಯಲ್ಲಿ ಇಂತಹ ಹೆಚ್ಚು ಪ್ರಕರಣಗಳಿಲ್ಲ. ಮಾಹಿತಿ ಲಭಿಸಿದಾಗಲೆಲ್ಲ ನಕಲಿ ಪಾನ್‌ಗಳನ್ನು ಬಯಲಿಗೆಳೆಯಲಾಗುತ್ತಿದೆ ಎಂದರು.
ಎರಡು ಪಾನ್ ಕಾರ್ಡ್‌ಗಳೊಂದಿಗೆ ತೆರಿಗೆಯನ್ನು ವಂಚಿಸಲು ಯಾರಿಗೂ ಅವಕಾಶ ದೊರೆಯದಂತೆ ಮಾಡಲು ಇಲಾಖೆಯು ಈ ಹಾವಳಿ ತಡೆಗಾಗಿ ಸೂಕ್ತ ವ್ಯವಸ್ಥೆಗಾಗಿ ವರ್ಷಗಳಿಂದಲೂ ಶ್ರಮಿಸುತ್ತಿತ್ತು. ಈ ಹಿಂದೆ ತೆರಿಗೆ ವಂಚನೆ ಮತ್ತು ಕಪ್ಪುಹಣ ಪ್ರಕರಣಗಳ ತನಿಖೆಯ ಸಂದರ್ಭ ಹಲವಾರು ಸಂದರ್ಭಗಳಲ್ಲಿ ನಕಲಿ ಪಾನ್ ಕಾರ್ಡ್‌ಗಳು ಪತ್ತೆಯಾಗಿದ್ದವು.
ನೂತನ ವಿದ್ಯುನ್ಮಾನ ವೇದಿಕೆಯು ನಕಲಿ ಪಾನ್ ಪತ್ತೆ ಹಚ್ಚಿದ ನಂತರ ತಮ್ಮ ವ್ಯಾಪ್ತಿಯ ತೆರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ನಕಲಿ ಕಾರ್ಡ್‌ನ್ನು ಅವರಿಗೆ ಒಪ್ಪಿಸುವಂತೆ ಅರ್ಜಿದಾರರಿಗೆ ತಿಳಿಸುವಂತೆ ಇಲಾಖಾ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸುತ್ತದೆ. ಅರ್ಜಿದಾರರು ಹಾಗೆ ಮಾಡದಿದ್ದಲ್ಲಿ ಅದು ಅಸಲಿ ಪಾನ್ ಕಾರ್ಡ್‌ನ್ನು ನಿರ್ಬಂಧಿಸುವ ಜೊತೆಗೆ ನಕಲಿ ಕಾರ್ಡ್‌ನ್ನು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳಿಸುತ್ತದೆ.
ಇತ್ತೀಚಿನ ದತ್ತಾಂಶಗಳಂತೆ ದೇಶದಲ್ಲಿ 24.37 ಕೋ.ಗೂ ಅಧಿಕ ಪಾನ್ ಕಾರ್ಡ್‌ಗಳಿವೆ. ನಕಲಿ ಕಾರ್ಡ್‌ಗಳ ನಿಖರವಾದ ಸಂಖ್ಯೆ ಲಭ್ಯವಿಲ್ಲ.





