ಹಣಬಲದಿಂದ ಸರಕಾರಗಳನ್ನು ಉರುಳಿಸುವುದು ಬಿಜೆಪಿಯ ಹೊಸ ಮಾದರಿ: ರಾಹುಲ್ ಗಾಂಧಿ

ಹೊಸದಿಲ್ಲಿ,ಮಾ.20: ಉತ್ತಾರಾಖಂಡ್‌ನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ವಿರುದ್ಧ ತೀವ್ರ ದಾಳಿಯನ್ನು ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಕಲ್ ಗಾಂಧಿ ಅವರು,‘‘ಇದು ಮೋದಿಜಿಯವರ ನಿಜವಾದ ಮುಖವನ್ನು ತೋರಿಸಿದೆ’’ಎಂದು ಹೇಳಿದರಲ್ಲದೆ, ಈ ಪುಢಾರಿತನವನ್ನು ಕಾಂಗ್ರೆಸ್ ಪಕ್ಷವು ಪ್ರಜಾಸತ್ತಾತ್ಮಕವಾಗಿ ಎದುರಿಸಲಿದೆ ಎಂದು ಘೋಷಿಸಿದರು.
ಉತ್ತರಾಖಂಡ್ ಬಿಕ್ಕಟ್ಟು ಕುರಿತು ಬಿಜೆಪಿಯನ್ನು ಗುರಿಯಾಗಿಸಿಕೊಂಡ ತನ್ನ ಸರಣಿ ಟ್ವೀಟ್‌ಗಳಲ್ಲಿ ರಾಹುಲ್, ಬಿಹಾರದಲ್ಲಿ ಚುನಾವಣಾ ಸೋಲಿನ ಬಳಿಕ ಕುದುರೆ ವ್ಯಾಪಾರ ಹಾಗೂ ಹಣ ಮತ್ತು ತೋಲ್ಬಲದ ವ್ಯಾಪಕ ದುರುಪಯೋಗದ ಮೂಲಕ ಚುನಾಯಿತ ಸರಕಾರಗಳನ್ನು ಉರುಳಿಸುವುದು ಈಗ ಬಿಜೆಪಿಯ ಹೊಸ ಮಾದರಿಯಾಗಿರುವಂತಿದೆ ಎಂದು ಕಿಡಿ ಕಾರಿದ್ದಾರೆ.
ಮೊದಲು ಅರುಣಾಚಲ ಪ್ರದೇಶದಲ್ಲಿ ಮತ್ತು ಈಗ ಉತ್ತರಾಖಂಡ್‌ನಲ್ಲಿ ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ಈ ದಾಳಿಯು ಮೋದಿಜಿಯವರ ಬಿಜೆಪಿಯ ನೈಜ ಮುಖವನ್ನು ತೋರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಪಕ್ಷದ ಒಂಭತ್ತು ಶಾಸಕರ ಬಂಡಾಯ ಮತ್ತು ಪ್ರತಿಪಕ್ಷ ಬಿಜೆಪಿಯಿಂದ ಸರಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕುಮಂಡನೆಯಿಂದಾಗಿ ಉತ್ತರಾಖಂಡದ ಕಾಂಗ್ರೆಸ್ ಸರಕಾರವು ಎರಡು ದಿನಗಳ ಹಿಂದೆ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಮಾ.28ರೊಳಗೆ ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಗೊಳಿಸುವಂತೆ ರಾಜ್ಯಪಾಲ ಕೃಷ್ಣಕಾಂತ ಪಾಲ್ ಅವರು ಶನಿವಾರ ಮುಖ್ಯಮಂತ್ರಿ ಹರೀಶ ರಾವತ್ ಅವರಿಗೆ ಸೂಚಿಸಿದ್ದಾರೆ.





