ಜಾಮಿಯಾ ವಿದ್ಯಾರ್ಥಿಗಳಿಂದ ಪರಿಸರಸ್ನೇಹಿ ತಳ್ಳುಗಾಡಿ
ಹೊಸದಿಲ್ಲಿ,ಮಾ.20: ರಾಷ್ಟ್ರಪತಿ ಭವನದಲ್ಲಿ ಇತ್ತೀಚಿಗೆ ನಡೆದ ನವೋನ್ವೇಷಣೆಗಳ ಮೇಳದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ಆಹಾರ ಮಾರಾಟದ ತಳ್ಳುಗಾಡಿ ಎಲ್ಲರ ಗಮನವನ್ನು ಸೆಳೆದಿದೆ. ತ್ಯಾಜ್ಯವಿಲೇವಾರಿ ವ್ಯವಸ್ಥೆಯೊಂದಿಗೆ ಸೌರ ವಿದ್ಯುತ್ ಉತ್ಪಾದನೆಗೂ ಈ ತಳ್ಳುಗಾಡಿಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.
ಮಂಡನೆಗಾಗಿ ಕಳುಹಿಸಲ್ಪಟ್ಟಿದ್ದ 114 ನವೋನ್ವೇಷಣೆಗಳಲ್ಲಿ ಆಯ್ಕೆಯಾದ ಆರು ಪ್ರವೇಶಗಳಲ್ಲಿ ಒಂದಾಗಿದ್ದ ಈ ತಳ್ಳುಗಾಡಿಗೆ ಪೇಟೆಂಟ್ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ವಿವಿಯು ತೊಡಗಿಕೊಂಡಿದೆ.
ಇತರ ಐದು ಪ್ರವೇಶಗಳು ಐಐಟಿ ಕಾನಪುರ,ಜಮ್ಮು ಕೇಂದ್ರೀಯ ವಿವಿ,ಐಐಟಿ ಮದ್ರಾಸ್,ಎನ್‌ಐಟಿ ತಿರುಚಿರಾಪಳ್ಳಿ ಮತ್ತು ಐಐಟಿ ದಿಲ್ಲಿ ಇವುಗಳಿಗೆ ಸೇರಿದ್ದವು.
‘ಇನ್ನೋಕಾರ್ಟ್’ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಆಹಾರ ಮಾರಾಟದ ತಳ್ಳುಬಂಡಿಯಾಗಿದ್ದು,ಸೂಕ್ತ ದಾಸ್ತಾನು ವ್ಯವಸ್ಥೆ,ಮೇಲೆ ಮುಚ್ಚಿಗೆಯ ಜೊತೆಗೆ ಸ್ವಚ್ಛತೆಯನ್ನು ಕಾಯ್ದುಕೊಳ್ಳುತ್ತದೆ. ಈ ತಳ್ಳುಬಂಡಿಯು ಭಾರತದಲ್ಲಿ ಬೀದಿ ಆಹಾರ ಮಾರಾಟದಲ್ಲಿ ಹೊಸ ಪರಿವರ್ತನೆಯನ್ನು ತರಲಿದೆ ಎಂದು ಜಾಮಿಯಾದ ನವೋನ್ವೇಷಣ ಮತ್ತು ಉದ್ಯಮಶೀಲತೆ ಕೇಂದ್ರದ ಗೌರವ ನಿರ್ದೇಶಕಿ ಮಿನಿ ಥಾಮಸ್ ಹೇಳಿದರು.
ಒಣ ಮತ್ತು ಹಸಿ ತ್ಯಾಜ್ಯವನ್ನು ಸಂಗ್ರಹಿಸಿಡಲು ತಳ್ಳುಗಾಡಿಯಲ್ಲಿ ಎರಡು ಪ್ರತ್ಯೇಕ ವಿಭಾಗಗಳನ್ನು ನಿರ್ಮಿಸಲಾಗಿದೆ.ಜಾಹೀರಾತು ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದು,್ದ ಮುಚ್ಚಿಗೆಯ ಮೇಲೆ ಸೌರ ಫಲಕವನ್ನು ಅಳವಡಿಸುವ ಯೋಜನೆಯಿದೆ ಎಂದರು.
ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳಾದ ಹುಮಾ ಪರ್ವೇಝ್, ಫೈಝಾ ಜಮಾಲ್ ಮತ್ತು ಫರಾಝ ಖಾನ್ ಅವರು ಈ ವಿನೂತನ ತಳ್ಳುಗಾಡಿಯನ್ನು ಅಭಿವೃದ್ಧಿಗೊಳಿಸಿದ್ದಾರೆ.
ವಿವಿಯು ಈಗ ಈ ತಳ್ಳುಗಾಡಿಯಲ್ಲಿ ಪ್ರಯೋಗಾರ್ಥವಾಗಿ ತನ್ನ ಆವರಣದಲ್ಲಿಯ ರಸ್ತೆಗಳಲ್ಲಿ ಕ್ಯಾಂಟೀನಿನ ಆಹಾರ ಪದಾರ್ಥಗಳ ಮಾರಾಟಕ್ಕೆ ತೊಡಗಿಸಲು ಉದ್ದೇಶಿಸಿದೆ.





