ಒಬಾಮ ಕ್ಯೂಬಾ ಪ್ರವಾಸ ಆರಂಭ

ಹವಾನ, ಮಾ.20: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ರವಿವಾರ ತನ್ನ ಐತಿಹಾಸಿಕ ಕ್ಯೂಬಾ ಪ್ರವಾಸವನ್ನು ಆರಂಭಿಸಿದ್ದಾರೆ. ಕಳೆದ 88 ವರ್ಷಗಳ ಬಳಿಕ ಅಮೆರಿಕದ ಅಧ್ಯಕ್ಷರೊಬ್ಬರು ಇದೇ ಮೊದಲ ಬಾರಿಗೆ ಕ್ಯೂಬಾವನ್ನು ಸಂದರ್ಶಸಿಸುತ್ತಿದ್ದಾರೆ. 1928ರಲ್ಲಿ ಕೆಲ್ವಿನ್ ಕೂಲಿಡ್‌ಝಾ ಕ್ಯೂಬಾ ಸಂದರ್ಶಿಸಿದ ಬಳಿಕ ಆ ದ್ವೀಪ ರಾಷ್ಟ್ರಕ್ಕೆ ಬೇರೆ ಯಾವುದೇ ಅಮೆರಿಕನ್ ಅಧ್ಯಕ್ಷರು ಭೇಟಿ ನೀಡಿರಲಿಲ್ಲ. ಒಬಾಮ ಎರಡು ದಿವಸಗಳ ಕಾಲ ಕ್ಯೂಬಾ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಒಬಾಮ ಅವರು ಕ್ಯೂಬಾಕ್ಕೆ ಭೇಟಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಒಬಾಮ ಕ್ಯೂಬಾ ಪ್ರವಾಸದಿಂದಾಗಿ ಎರಡೂ ದೇಶಗಳಲ್ಲಿ ಹೊಗೆಯಾಡುತ್ತಿರುವ ಶೀತಲಸಮರಕ್ಕೆ ತಾತ್ಕಾಲಿಕ ವಿರಾಮ ದೊರೆಯುವ ನಿರೀಕ್ಷೆಯಿದೆ. ಅಮೆರಿಕ ಅಧ್ಯಕ್ಷರ ಭೇಟಿಯು ಉಭಯದೇಶಗಳ ನಡುವೆ ವಾಣಿಜ್ಯ ಸಂಬಂಧಗಳನ್ನು ತೆರೆಯುವ ನಿರೀಕ್ಷೆಯಿದೆ. ಕ್ಯೂಬಾ ಪ್ರವಾಸದ ಬಳಿಕ ಒಬಾಮ ಅರ್ಜೆಂಟೀನಾ ಸಂದರ್ಶಿಸಲಿದ್ದಾರೆ.





