ಭಿನ್ನತೆ ಮರೆತು ಸತ್ಪ್ರಜೆಗಳಾಗಿ ಬೆಳೆಯಿರಿ: ಶಂಕರ ಬಿದರಿ ಸಲಹೆ

ಬೆಂಗಳೂರು, ಮಾ. 20: ಭಾಷೆ, ದ್ವೇಷ, ಪ್ರದೇಶ ಹಾಗೂ ಲಿಂಗ ಭೇದ ಮರೆತು ನಾವೆಲ್ಲರೂ ಸತ್ಪ್ರಜೆಗಳಾಗಿ ಬೆಳೆಯಬೇಕು ಎಂದು ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದ್ದಾರೆ.
ರವಿವಾರ ಇಲ್ಲಿನ ಕೆ.ಆರ್.ಪುರಂದಲ್ಲಿರುವ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಕನ್ನಡೋತ್ಸವ ಇದು ಕರುನಾಡು ಹೃದಯಗಳ ಉತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸವನ್ನು ನೋಡಿದಾಗ ನಾಡಿಗೆ ಹಾಗೂ ದೇಶಕ್ಕೆ ಬಹಳಷ್ಟು ಮಹತ್ವ ಸಿಕ್ಕಿದೆ ಎಂದರು.
ರಾಜ್ಯದ ಭಾಷೆಗಳನ್ನು ಮರೆತು ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬುದನ್ನು ಅರಿಯಬೇಕು. ನಮ್ಮ ದೇಶದಲ್ಲಿ ಹೊರ ದೇಶದವರಿಗೆ ತೊಂದರೆ ಮಾಡದೆ, ನಮ್ಮಲ್ಲಿ ಅವರಿಗೆ ಜಾಗ ಕೊಟ್ಟಿದ್ದೇವೆ. ಇದು ಭಾರತೀಯ ಸಹೃದಯ ಮನೋಭಾವಕ್ಕೆ ಸಾಕ್ಷಿ ಎಂದರು.
ಗೆಲುವಿಗೆ ಯಾವುದೇ ಅಡ್ಡವಿಲ್ಲ. ಸಾಧನೆ ಮಾಡಬೇಕಾದರೆ ನೇರ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದ ಶಂಕರ ಬಿದರಿ, ತಮ್ಮ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಪ್ರತಿಭೆಯನ್ನು ಶೈಕ್ಷಣಿಕ ಏಳ್ಗೆಯಲ್ಲಿ ಸಾಬೀತು ಪಡಿಸಬೇಕು ಎಂದರು.
ಅಂಕಣಕಾರ ಹಾಗೂ ಲೇಖಕ ಯೋಗೀಶ್ ಮಾಸ್ಟರ್ ಮಾತನಾಡಿ, ಕನ್ನಡ ಭಾಷೆಯೊಂದು ಅನುಭವ ಮಂಟಪವಿದ್ದಂತೆ. ಇಲ್ಲಿ ಎಲ್ಲ ಕಸುಬುದಾರರು ತಮ್ಮ ಚೌಕಟ್ಟಿನ ಅನುಭವ ಹಂಚಿಕೊಂಡು ಜೀವನ ನಡೆಸುತ್ತಾರೆ. ಚೌಕಟ್ಟಿನಿಂದ ಹೊರಬಂದು ಹೊಸ ಪ್ರಯೋಗಗಳನ್ನು ಮಾಡಬೇಕು. ಆಗ ಕನ್ನಡ ಭಾಷೆಯ ಪರಂಪರೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪುರಂದರದಾಸರು, ಕನಕದಾಸರು ಭಕ್ತಿಪಂಥದ ತಮ್ಮ ಕೀರ್ತನೆಗಳ ಮೂಲಕ ಅದ್ಭುತವಾದ ಕ್ರಾಂತಿ ಮಾಡಿದವರು. ನಾಡು-ನುಡಿಯನ್ನು ಶ್ರೀಮಂತ ಗೊಳಿಸಿದವರು. ಏಳು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮ ಕನ್ನಡಕ್ಕಿದೆ. ಬೇರೆ ಯಾವ ಭಾಷೆಗೂ ಇಂತಹ ಹೆಮ್ಮೆಯ ಕಿರೀಟ ಇರಲು ಸಾಧ್ಯವಿಲ್ಲ. ನಾಡಿನವರೇ ಆದ ಹಿರಿಯ ಲೇಖಕ ಎಸ್.ಎಲ್.ಬೈರಪ್ಪ ಅವರ ಅದೆಷ್ಟೋ ಕಾದಂಬರಿಗಳು 13 ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯತೆ ತಂಡುಕೊಟ್ಟಿದೆ ಎಂದು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಂ.ಮಂಜುನಾಥ್ ತಿಳಿಸಿದರು.
ಕಾಲೇಜಿನ ಅಧ್ಯಕ್ಷ ವಿ.ಜಿ.ಜೋಸೆಫ್, ನಟಿ ವೈಶಾಲಿ ದೀಪಕ್, ಪತ್ರಕರ್ತ ಮಹೇಶ್ ಕುಮಾರ್, ಸಾಹಸಪಟು ಜ್ಯೋತಿ ರಾಜ್, ವಿದ್ಯಾಲಯದ ಕುಲಪತಿ ಹಿಂಚಿಗೇರಿ ಮತ್ತಿತರರು ಉಪಸ್ಥಿತರಿದ್ದರು.







