ಅಭಿವ್ಯಕ್ತಿ ಸ್ವಾತಂತ್ರವೆಂದರೆ ದೇಶವನ್ನು ನಾಶಪಡಿಸುವ ಸ್ವಾತಂತ್ರವಲ್ಲ: ಬಿಜೆಪಿ

ಹೊಸದಿಲ್ಲಿ, ಮಾ.20: ಅಭಿವ್ಯಕ್ತಿ ಸ್ವಾತಂತ್ರವು ದೇಶವನ್ನು ನಾಶಗೊಳಿಸುವ ಹಕ್ಕು ನೀಡುವುದಿಲ್ಲವೆಂದು ಬಿಜೆಪಿಯಿಂದು ಹೇಳಿದೆ. ರಾಷ್ಟ್ರೀಯತೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ವಿಚಾರವನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣೆಯು ತನ್ನ ರಾಜಕೀಯ ನಿರ್ಣಯಗಳಲ್ಲಿ ಅಳವಡಿಸಿಕೊಂಡಿದೆ.
ನಿನ್ನೆ ನಡೆದ ಕಾರ್ಯಕಾರಣಿಯ ಉದ್ಘಾಟನಾ ಭಾಷಣದಲ್ಲಿ ಬಿಜೆಪಿ ಅಧಕ್ಷ ಅಮಿತ್ ಶಾ, ದೇಶದ ಮೇಲೆ ಯಾವುದೇ ದಾಳಿಯನ್ನು ಬಿಜೆಪಿ ಸಹಿಸದು ಎಂದಿದ್ದರು. ಆ ಬಳಿಕ ಕಾರ್ಯಕಾರಿಣಿಯ ಎರಡು ದಿನಗಳ ಅಧಿವೇಶನದಲ್ಲೂ ರಾಷ್ಟ್ರೀಯತೆಯ ಕುರಿತು ವ್ಯಾಖ್ಯಾನ ಕೇಂದ್ರ ಸ್ಥಾನ ಪಡೆದಿತ್ತು.
ಅಭಿವ್ಯಕ್ತಿ ಸ್ವಾತಂತ್ರ ಹಾಗೂ ರಾಷ್ಟ್ರೀಯತೆಗಳು ಒಟ್ಟಾಗಿಯೇ ಇರುತ್ತವೆ. ಸಂವಿಧಾನವು ಭಿನ್ನಮತ ಹಾಗೂ ವಿರೋಧವನ್ನು ಅಭಿವ್ಯಕ್ತಿಸಲು ಸಂಪೂರ್ಣ ಸ್ವಾತಂತ್ರ ನೀಡಿದೆ. ಆದರೆ ದೇಶದ ವಿನಾಶಕ್ಕೆ ಅದು ಸ್ವಾತಂತ್ರ ನೀಡಿಲ್ಲವೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸಭೆಯ ಕುರಿತು ಪತ್ರಕರ್ತರಿಗೆ ವಿವರ ನೀಡುತ್ತ ಹೇಳಿದರು. ರಾಷ್ಟ್ರೀಯತೆಯ ಸಿದ್ಧಾಂತವು ನಮ್ಮ ನಂಬಿಕೆ ಹಾಗೂ ತತ್ತ್ವಜ್ಞಾನಕ್ಕೆ ಮಾರ್ಗದರ್ಶಿಯಾಗಿದೆಯೆಂದು ಅವರು ಸ್ಪಷ್ಟಪಡಿಸಿದರು
ಕಾರ್ಯಕಾರಿಣಿಯಲ್ಲಿ ಮಾತನಾಡಿದ ನಾಯಕರೆಲ್ಲರೂ ಇತ್ತೀಚಿನ ಜೆಎನ್‌ಯು ವಿವಾದದ ಕುರಿತು ಕಾಂಗ್ರೆಸನ್ನು ನೆಲಕ್ಕೊರಸುವ ಹುರುಪಿನಲ್ಲಿದ್ದರು.
ಸಭೆಯು ‘ಭಾರತ್ ಮಾತಾಕೀ ಜೈ’ ಘೋಷಣೆಯ ಕುರಿತಾಗಿಯೂ ಚರ್ಚಿಸಿತೇ ಎಂಬ ಪ್ರಶ್ನೆಗೆ, ಇದೊಂದು ಚರ್ಚಾತೀತ ವಿಷಯವೆಂದು ಬಿಜೆಪಿ ನಂಬಿದೆ. ಜನರಿಗೆ ಈ ಘೋಷಣೆಯ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ಅದನ್ನು ತಾವು ನಿನ್ನೆ ಕೋಲ್ಕತಾದಲ್ಲಿ ಕಂಡಿದ್ದೇವೆಂದು ಜೇಟ್ಲಿ, ನಿನ್ನೆ ಕ್ರಿಕೆಟ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ತಂಡವನ್ನು ಸೋಲಿಸಿದಾಗ ಮೊಳಗಿದ ಘೋಷಣೆಯನ್ನು ತನ್ನ ಮಾತಿಗೆ ಸಮರ್ಥನೆಯಾಗಿ ನೀಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಈಗ ರಾಜಕೀಯ ಶಕ್ತಿ ಕಳೆದುಕೊಂಡಿದೆ. ಅದರ ಸ್ಥಾನಮಾನ ಕುಸಿದಿದೆ. ಬಿಹಾರ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡುಗಳಂತಹ ರಾಜ್ಯಗಳಲ್ಲಿ ಅದು ಯಾವುದೇ ಮೈತ್ರಿ ಕೂಟದ ‘ಬಾಲ’ವಾಗಿರುವುದರಲ್ಲೇ ತೃಪ್ತಿ ಕಾಣುತ್ತಿದೆಯೆಂದು ಟೀಕಿಸಿದರು.
ಕಾಂಗ್ರೆಸ್ ಸರಕಾರ ಬಂಡಾಯ ಎದುರಿಸುತ್ತಿರುವ ಉತ್ತರಾಖಂಡ ಹಾಗೂ ಜಮ್ಮು-ಕಾಶ್ಮೀರಗಳಲ್ಲಿ ಸರಕಾರ ರಚನೆಯ ಬಗ್ಗೆ ಕಾರ್ಯಕಾರಿಣಿ ಚರ್ಚಿಸಿಲ್ಲ.
ಆದಾಗ್ಯೂ, ಪಕ್ಷದ ನಿರ್ಣಯವು ಜಮ್ಮು-ಕಾಶ್ಮೀರದಲ್ಲಿ :ಆಡಳಿತದ ಕಾರ್ಯಸೂಚಿಯನ್ನು’ ಒತ್ತಿ ಹೇಳಿದೆಯೆಂದು ಜೇಟ್ಲಿ ನುಡಿದರು.







