ಯುಎಇ ತನಿಖಾ ತಂಡ ರಶ್ಯಕ್ಕೆ
ಫ್ಲೈದುಬೈ ವಿಮಾನ ದುರಂತ:
ದುಬೈ,ಮಾ.20: ಶನಿವಾರ ಸಂಭವಿಸಿದ ‘ಫ್ಲೈ ದುಬೈ’ ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲು ಯುಎಇನ ತಂಡವೊಂದು ರವಿವಾರ ರಶ್ಯಕ್ಕೆ ಆಗಮಿಸಿದೆ. ವಿಮಾನದ ನಿರ್ಮಾಣ ಸಂಸ್ಥೆಗಳಾದ ಬೋಯಿಂಗ್ ಕಂಪೆನಿಯ ತಜ್ಞರು, ಯುಎಇನ ಸಾರಿಗೆ ಸುರಕ್ಷತೆ ಮಂಡಳಿಯ ಅಧಿಕಾರಿಗಳು ತಂಡದಲ್ಲಿದ್ದಾರೆ. ದುರಂತಕ್ಕೀಡಾದ ವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾಗಿರುವುದಾಗಿ ರಶ್ಯದ ಸುದ್ದಿಸಂಸ್ಥೆಗಳು ವರದಿ ಮಾಡಿವೆಯಾದರೂ, ಯುಎಇನ ನಾಗರಿಕ ವಾಯುಯಾನ ಪ್ರಾಧಿಕಾರದ ವಿಮಾನದುರಂತ ತನಿಖಾ ವಿಭಾಗದ ಸಹಾಯಕ ನಿರ್ದೇಶಕ ಆಲ್ ಹುಸ್ಸಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ವಿಮಾನವು ತಾಂತ್ರಿಕ ವೈಫಲ್ಯದಿಂದಾಗಿ ಪತನಗೊಂಡಿರುವ ಸಾಧ್ಯತೆಯಿಲ್ಲವೆಂದು ಅವರು ಶಂಕಿಸಿದ್ದಾರೆ. ಕೇವಲ ಐದು ವರ್ಷವಷ್ಟೇ ಆಗಿರುವ ಈ ವಿಮಾನವನ್ನು ಜನವರಿ 21ರಂದು ಪರಿಶೀಲನೆಗೊಳಪಡಿಸಿತ್ತು.
ಆದಾಗ್ಯೂ ತನಿಖಾ ವರದಿ ಬರುವ ತನಕ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದಾರೆ. ಮೃತರ ಕುಟುಂಬಿಕರಿಗೆ ಪರಿಹಾರವನ್ನು ನೀಡಲು ಪ್ರಯತ್ನಿಸುತ್ತಿರುವುದಾಗಿ ಫ್ಲೈದುಬೈನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೈತ್ ಅಲ್ ಗೈತ್ ತಿಳಿಸಿದ್ದಾರೆ.





