ಅಡಿಗರ ಸಾಹಿತ್ಯ ಹೋರಾಟಗಳಿಗೆ ಸ್ಫೂರ್ತಿ: ಶರಣಪ್ಪ ಗಬ್ಬೂರ್
ಬೆಂಗಳೂರು, ಮಾ. 20: ಗೋಪಾಲಕೃಷ್ಣ ಅಡಿಗರು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯ, ಅಸಮಾನತೆ, ಅಧರ್ಮಗಳ ಕುರಿತು ಕಾವ್ಯ, ಕಾದಂಬರಿಗಳನ್ನು ರಚಿಸುವುದರ ಮೂಲಕ ಜನರನ್ನು ಜಾಗೃತಿಗೊಳಿಸುತ್ತಾ ಅಂದಿನ ಹೋರಾಟಗಳಿಗೆ ಸ್ಫೂರ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಲೇಖಕ ಶರಣಪ್ಪ ಗಬ್ಬೂರ್ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಕಬ್ಬನ್‌ಪಾರ್ಕ್‌ನಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಅಕ್ಷಯ ಫೌಂಡೇಷನ್ ಸಹಯೋಗದೊಂದಿಗೆ ಆಯೋಜಿಸಿದ್ದ ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಕುರಿತು ಮಾತನಾಡಿದ ಅವರು, ಸ್ವಾತಂತ್ರ ಪೂರ್ವದಲ್ಲಿ ಸಮಾಜವನ್ನು ವಸ್ತುನಿಷ್ಠವಾಗಿ ಗ್ರಹಿಸಿ ವಾಸ್ತವತೆಯನ್ನು ಆಧರಿಸಿ ಅಡಿಗರು ಸಾಹಿತ್ಯವನ್ನು ರಚಿಸಿದ್ದಾರೆ ಎಂದರು.
ತಮ್ಮ ಸಾಹಿತ್ಯ ವಿಮರ್ಶೆ ಮೂಲಕ ಹೊಸ ರೂಪದ ಸಾಹಿತ್ಯವನ್ನು ರಚಿಸಿ ಜನರನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಅಡಿಗರು ಮಾಡಿದ್ದರು. ಆದುದರಿಂದಲೇ ಇಂದಿಗೂ ಅವರ ಸಾಹಿತ್ಯ ಅತ್ಯಂತ ಪ್ರಸ್ತುತವಾಗಿದೆ ಎಂದು ಶರಣಪ್ಪ ಗಬ್ಬೂರು ಇದೇ ವೇಎ ಪ್ರತಿಪಾದಿಸಿದರು.
ಕವಿಯಾಗಲು ಬಯಸುವಂತಹವರು ಮೊದಲು ತಮ್ಮ ಸುತ್ತಲಿನ ಪರಿಸರವನ್ನು ಪ್ರೀತಿಸಬೇಕು. ಅದನ್ನು ಕುರಿತು ಸಾಹಿತ್ಯವನ್ನು ರಚಿಸುವಂತಾಗಬೇಕು. ಅದರ ಹಿನ್ನೆಲೆಯಲ್ಲಿ ನೋಡುವುದಾದರೆ ಅಡಿಗರು ತಮ್ಮ ಸಾಹಿತ್ಯದಲ್ಲಿ ಹೆಚ್ಚಾಗಿ ತಮ್ಮ ಸುತ್ತಲಿನ ಪರಿಸರದ ಕುರಿತೆ ಬರೆದಿದ್ದಾರೆ. ಅವರ ಸಾಹಿತ್ಯವನ್ನು ನೋಡಿದರೆ ಅವರಿಗೆ ಪರಿಸರದ ಮೇಲಿನ ಕಾಳಜಿ ಎಷ್ಟಿತ್ತು ಎಂಬುದು ಅರ್ಥವಾಗುತ್ತದೆ ಎಂದರು.
ಅಡಿಗರು ಹೆಚ್ಚಾಗಿ ಯುವಜನರನ್ನು ವೈಯುಕ್ತಿಕ ಕ್ರಾಂತಿಯತ್ತ ತರುವ ಒಲವು ಹೊಂದಿದ್ದರು. ಅದಕ್ಕಾಗಿ ಅವರು ಸಾಹಿತ್ಯವನ್ನು ರಚಿಸಿ ಯುವಜನರನ್ನು ಪ್ರೋತ್ಸಾ ಹಿಸುತ್ತಿದ್ದರು. ಸಂದರ್ಭಕ್ಕೆ ತಕ್ಕಂತೆ ಸಾಹಿತ್ಯವನ್ನು ರಚಿಸುವುದ ಮೂಲಕ ಹೊಸ ವಿಚಾರಗಳನ್ನು ಯುವಜನರಿಗೆ ನೀಡುತ್ತಿದ್ದವರಲ್ಲಿ ಮೊದಲಿಗರಾಗಿದ್ದರು ಎಂದು ಅವರು ಬಣ್ಣಿಸಿದರು.
ಇತ್ತೀಚಿನ ದಿನಗಳಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕಾದ ಯುವಕರೇ ಇಂದು ದಾರಿ ತಪ್ಪುತ್ತಿದ್ದಾರೆ. ಆದುದರಿಂದ ಇವತ್ತಿನ ಯುವಜನರಿಗೆ ಅಗತ್ಯವಾದ ಸಾಹಿತ್ಯವನ್ನು ಯುವ ಕವಿಗಳು ನೀಡಬೇಕು ಮತ್ತು ಅದನ್ನು ಓದುವಂತೆ ಯುವಜನರಲ್ಲಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ನಮ್ಮ ಅನುಭವಗಳೊಂದಿಗೆ ಸಮಾಜವನ್ನು ನೋಡಬೇಕು. ಯಾರೆ ಆದರೂ ಬೆಳೆಯಲು ಅವರಿಗೆ ಇತರರಿಂದ ಪ್ರೇರಣೆ ಮತ್ತು ಸ್ಫೂರ್ತಿ ಅಗತ್ಯ. ಆದುದರಿಂದ ಸಾಹಿತ್ಯವನ್ನು ರಚಿಸುವಂತಹ ಯುವ ಕವಿಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.







