ಗಿನಿಯಾ: ಎಬೊಲಾಗೆ ನಾಲ್ಕನೆ ಬಲಿ
ಒಂಕ್ರಿ, ,ಮಾ.20: ಪಶ್ಚಿಮ ಆಫ್ರಿಕದ ರಾಷ್ಟ್ರವಾದ ಗಿನಿಯಾದಲ್ಲಿ ಎಬೋಲಾ ಕಾಯಿಲೆಗೆ ರವಿವಾರ ಬಾಲಕಿಯೊಬ್ಬಳು ಬಲಿಯಾಗಿದ್ದು, ಇದರೊಂದಿಗೆ ಫೆ.29ರಿಂದ ಈ ಭಯಾನಕ ಸೋಂಕುರೋಗದಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ. 2013ರಿಂದೀಚೆಗೆ ಗಿನಿಯಾ, ಸಿಯೊರಾ ಲಿಯೋನ್ ಲೈಬೀರಿಯಗಳಲ್ಲಿ ಎಬೊಲಾ ಕಾಯಿಲೆಯಿಂದಾಗಿ ಒಟ್ಟು 11,300 ಮಂದಿ ಸಾವನ್ನಪ್ಪಿದ್ದಾರೆ. ಜೆರೆಕೊರ್ ಎಂಬಲ್ಲಿರುವ ಎಬೊಲಾ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಬಾಲಕಿಯು ರವಿವಾರ ಕೊನೆಯುಸಿರೆಳೆದಳೆಂದು ಕೇಂದ್ರದ ವಕ್ತಾರೆ ಫೊಡ್ ಟಾಸ್ ಸಿಲ್ಲಾ ತಿಳಿಸಿದ್ದಾರೆ. ಕಳೆದ ಫೆಬ್ರವರಿಯಂದೀಚೆಗೆ ಎಬೊಲಾಕ್ಕೆ ಬಲಿಯಾದವರ ಕುಟುಂಬಗಳ ಜೊತೆ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಲು ಆರೋಗ್ಯ ಕಾರ್ಯಕರ್ತರು ಶ್ರಮಿಸುತ್ತಿರುವುದಾಗಿ ತಿಳಿದುಬಂದಿದೆ. ಎಬೊಲಾ ಕಾಯಿಲೆಯು ಮೊತ್ತಮೊದಲ ಬಾರಿಗೆ ಗಿನಿಯಾದಲ್ಲಿ ವರದಿಯಾಗಿದ್ದು, ಕಳೆದ ವರ್ಷದ ಡಿಸೆಂಬರ್‌ನಿಂದೀಚೆಗೆ ಆ ದೇಶದಲ್ಲಿ 2,500ಕ್ಕೂ ಅಧಿಕ ಮಂದಿ ಈ ಕಾಯಿಲೆಯಿಂದ ಮೃತಪಟ್ಟಿದ್ದರು. ಎಬೊಲಾ ಸದ್ಯ ಗಿನಿಯಾದಲ್ಲಿ ನಿಯಂತ್ರಣದಲ್ಲಿದೆ. ಆದರೆ ರೋಗ ಹರಡುವ ವೈರಸ್ ಕಣ್ಣುಗಳು, ಕೇಂದ್ರ ನರವ್ಯೆಹ ವ್ಯವಸ್ಥೆ ಹಾಗೂ ದೇಹದ ದ್ರವಾಂಶಗಳಲ್ಲಿ ಬದುಕುಳಿಯುವ ಸಾಧ್ಯತೆಯಿರುವುದರಿಂದ ಕಾಯಿಲೆಯು ಯಾವುದೇ ಸಮಯದಲ್ಲಿ ತಲೆಯೆತ್ತುವ ಸಾಧ್ಯತೆಯಿರುವುದಾಗಿ ವಿಶ್ವ ಆರೋಗ್ಯಸಂಸ್ಥೆ ಎಚ್ಚರಿಕೆ ನೀಡಿದೆ.





