ಐಸಿಸಿ ಟಿ-20 ಕ್ರಿಕೆಟ್ ಪಂದ್ಯ
ಕ್ರೀಡಾಂಗಣದ ಸುತ್ತ ಇಂದು ಸಂಚಾರ ನಿರ್ಬಂಧ
ಬೆಂಗಳೂರು, ಮಾ. 20: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.21 ಮತ್ತು ಮಾ.23ರಂದು ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿದ್ದು, ಈ ವೇಳೆ ಉಂಟಾಗುವ ಸಂಚಾರ ದಟ್ಟಣೆ ತಡೆಗಟ್ಟುವ ಹಿನ್ನ್ನೆಲೆಯಲ್ಲಿ ಕ್ರೀಡಾಂಗಣದ ವ್ಯಾಪ್ತಿ ಸಂಚಾರ ನಿರ್ಬಂಧ ಮಾಡಲಾಗಿದೆ.
ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11.30 ವರೆಗೂ ವಾಹನಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ವಾಹನ ನಿಲುಗಡೆಯ ಸ್ಥಳ: ಕ್ರೀಡಾಂಗಣಕ್ಕೆ ಆಗಮಿಸುವವರು ಬೌರಿಂಗ್ ಇನ್ಸ್‌ಟಿಟ್ಯೂಟ್, ಸೇಂಟ್ ಮಾರ್ಕ್ಸ್ ಕ್ಯಾಥಡ್ರೆಲ್ ಚರ್ಚ್, ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಹಾಗೂ ಶಿವಾಜಿನಗರ ಬಸ್ ನಿಲ್ದಾಣದ 1ನೆ ಮಹಡಿಯಲ್ಲಿ ನಿಲುಗಡೆ ಮಾಡಬಹುದು.
ಹೆಚ್ಚುವರಿ ಬಿಎಂಟಿಸಿ ಬಸ್‌ಗಳು: ಬಿಎಂಟಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾಣಿಕ್ ಷಾ ಪರೇಡ್ ಮೈದಾನದಿಂದ ಕಾಡುಗೋಡಿ ಬಸ್ ನಿಲ್ದಾಣ, ಮೆಯೋಹಾಲ್-ಕಾಡುಗೋಡಿ ಬಸ್ ನಿಲ್ದಾಣ, ಬ್ರಿಗೇಡ್ ರಸ್ತೆ-ಇಲೆಕ್ಟ್ರಾನಿಕ್‌ಸಿಟಿ, ಬ್ರಿಗೇಡ್‌ರಸ್ತೆ-ಬನ್ನೇರುಘಟ್ಟ ರಾಷ್ಟೀಯ ಉದ್ಯಾನ, ಶಿವಾಜಿನಗರ-ಬನಶಂಕರಿ, ಚಿನ್ನಸ್ವಾಮಿ ಕ್ರೀಡಾಂಗಣ-ಕೆಂಗೇರಿ, ಕೆಎಚ್‌ಬಿ ಕ್ವಾಟ್ರಸ್, ಬಿಆರ್‌ವಿ ಪರೇಡ್ ಮೈದಾನ-ಜನಪ್ರಿಯ ಟೌನ್‌ಷಿಪ್, ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣ-ನೆಲಮಂಗಲ, ಎಂ.ಜಿ.ರಸ್ತೆ ಮೆಟ್ರೊನಿಲ್ದಾಣ- ಯಲಹಂಕ 5ನೆ ಹಂತ, ಬಿಆರ್‌ವಿ ಪರೇಡ್ ಮೈದಾನ-ಆರ್.ಕೆ.ಹೆಗಡೆ ನಗರ, ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣ-ಬಾಗಲೂರು, ಮೆಯೋಹಾಲ್-ಹೊಸಕೋಟೆ.
ಅಗತ್ಯವಿದ್ದಲ್ಲಿ, ವಜ್ರ ಬಸ್‌ಗಳ ಸೇವೆಯನ್ನೂ ಪ್ರಮುಖ ಸ್ಥಳಗಳಿಗೆ ಕಲ್ಪಿಸಲಾಗುವುದು. ಇವುಗಳ ಸಮರ್ಪಕ ನಿರ್ವಹಣೆಗೆ ಸಂಚಾರ ನಿಯಂತ್ರಕರು, ಸಹಾಯಕ ಸಂಚಾರ ವ್ಯವಸ್ಥಾಪಕರನ್ನು ನಿಯೋಜಿಸಲಾಗಿದೆ. ಭದ್ರತೆ ದೃಷ್ಟಿಯಿಂದ ನಾಲ್ಕು ಸಾರಥಿ ವಾಹನಗಳೂ ಇರುತ್ತವೆ ಎಂದು ಬಿಎಂಟಿಸಿ ಪ್ರಕಟನೆ ಹೇಳಿದೆ.







