ವಿದ್ಯಾರ್ಥಿನಿಗೆ ವಂಚನೆ ಆರೋಪ: ಇಂದು ಶಿಕ್ಷೆಯ ಪ್ರಮಾಣ ಪ್ರಕಟ
ಮಂಗಳೂರು, ಮಾ.20: ವಿದ್ಯಾರ್ಥಿನಿಗೆ ವಂಚಿಸಿದ ಆರೋಪಿ ಉಡುಪಿ ಜಿಲ್ಲೆ ಬೆಳ್ಮಣ್ ಸಮೀಪದ ಸಾಂತೂರಿನ ಮಹೇಶ್ ಸಾಲ್ಯಾನ್ (24)ನ ಆರೋಪ ಸಾಬೀತಾಗಿದೆ.
ಆತ ಅಪರಾಧಿ ಎಂಬುದಾಗಿ ಮಂಗಳೂರಿನ 6ನೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಮಾನಕ್ಕೆ ಬಂದಿದ್ದು, ಶಿಕ್ಷೆಯ ಪ್ರಮಾಣ ಮಾ.21ರಂದು ಪ್ರಕಟವಾಗಲಿದೆ.
ಪ್ರಕರಣದ ವಿವರ: 2011ರ ಡಿಸೆಂಬರ್‌ನಲ್ಲಿ ಮೊಬೈಲ್ ಮಿಸ್ಡ್‌ಕಾಲ್ ಮೂಲಕ ಆರೋಪಿ ಮಹೇಶ್ ಸಾಲಿಯಾನ್‌ಗೆ ದ್ವಿತೀಯ ಬಿಕಾಂ ಓದುತ್ತಿದ್ದ ಬಡಗ ಎಡಪದವಿನ 18ರ ಹರೆಯದ ವಿದ್ಯಾರ್ಥಿನಿಯ ಪರಿಚಯವಾಗಿತ್ತು. ಆತ ತಾನು ಪಿಎಸ್ಸೈ ಹಾಗೂ ಐಪಿಎಸ್ ಪರೀಕ್ಷೆ ಬರೆಯುತ್ತಿದ್ದೇನೆ ಎಂದು ಹೇಳಿ ಆಕೆಯನ್ನು ನಂಬಿಸಿದ್ದ. ಹಾಗೆ ಉದ್ಯೋಗ ದೊರಕಿಸಿ ಕೊಡುವುದಾಗಿ ಹೇಳಿ ಆಕೆಯಿಂದ ಮೊದಲು 75,000 ರೂ. ಮತ್ತು ಬಳಿಕ 40,000 ರೂ. ನಗದು ಹಾಗೂ ಆಕೆಯ ಕುತ್ತಿಗೆಯಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಸರವನ್ನು ಪಡೆದುಕೊಂಡಿದ್ದ. ಬಳಿಕ ಆಕೆಯ ಅಂಕ ಪಟ್ಟಿಯನ್ನು ಪಡೆದು ಅದನ್ನು ಸೈಬರ್ ಕೇಂದ್ರವೊಂದಕ್ಕೆ ಕೊಂಡೊಯ್ದು, ಅಂಕಗಳನ್ನು ತಿದ್ದಿ ಜಾಸ್ತಿ ಅಂಕಗಳನ್ನು ನಮೂದಿಸಿ ಖಾಸಗಿ ಕಂಪೆನಿಯೊಂದರ ನಕಲಿ ಉದ್ಯೋಗ ನೇಮಕಾತಿ ಪತ್ರವನ್ನು ತಯಾರಿಸಿ ಉದ್ಯೋಗದ ಆರ್ ಪತ್ರವನ್ನು ವಿದ್ಯಾರ್ಥಿನಿಗೆ ನೀಡಿದ್ದನು. ಆ ಬಳಿಕ ಮದುವೆಯಾಗುವುದಾಗಿ ಆಕೆಯನ್ನು ನಂಬಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದನು ಎಂದು ಆರೋಪಿಸಲಾಗಿತ್ತು.
ತನಗೆ ಕೆಲಸ ಸಿಗದ ಬಗ್ಗೆ ಹಾಗೂ ಮದುವೆಯಾಗುವ ಹುಸಿ ಭರವಸೆ ನೀಡಿದ ಬಗ್ಗೆ 2012ರ ಎಪ್ರಿಲ್‌ನಲ್ಲಿ ವಿದ್ಯಾರ್ಥಿನಿಗೆ ತಿಳಿದು ಬಂದಿದ್ದು, ಆಕೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಎ.20ರಂದು ದೂರು ಸಲ್ಲಿಸಿದ್ದರು. ಎಪ್ರಿಲ್ 21ರಂದು ಆತನ ಬಂಧನವಾಗಿತ್ತು. ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ.ಕೆ.ತಿಮ್ಮಯ್ಯ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ 6ನೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಟಿ. ಪುಟ್ಟರಂಗಸ್ವಾಮಿ ಅವರು ಆರೋಪಿಯು ವಿದ್ಯಾರ್ಥಿನಿಗೆ ಮೋಸ ಮಾಡಿರುವುದು(ಐಪಿಸಿ ಸೆ.420) ಮತ್ತು ನಕಲಿ ಅಂಕಪಟ್ಟಿ ತಯಾರಿ ಮಾಡಿರುವುದು (ಐಪಿಸಿ ಸೆಕ್ಷನ್ 468) ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ ಸಾಕ್ಷಾಧಾರಗಳ ಕೊರತೆ ಇದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿ ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಲಿದ್ದಾರೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಅವರು ವಾದಿಸಿದ್ದರು. ಆರೋಪಿ ಮಹೇಶ್ ಸಾಲ್ಯಾನ್ 2012ರಲ್ಲಿ ಬಂಧನವಾದ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಆದರೆ ಬಳಿಕ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಾರಂಟ್ ಹೊರಡಿಸಲಾಗಿತ್ತು. 2015ರ ಸೆ.10ರಂದು ಮತ್ತೆ ಬಂಧಿತನಾಗಿದ್ದು, ಆರು ತಿಂಗಳಿಂದ ಜೈಲಿನಲ್ಲಿದ್ದಾನೆ. ಮಂಗಳೂರು ಜೈಲಿನಲ್ಲಿ ಗ್ರೂಪಿಸಂ ಮಾಡಿದ ಆರೋಪದ ಮೇಲೆ ಆತನನ್ನು ಬೆಳಗಾವಿ ಜೈಲಿಗೆ ವರ್ಗಾವಣೆ ಮಾಡಲಾಗಿದೆ.







