ತಂಬಾಕು ಉತ್ಪಾದನೆಯ ಮೇಲೆ ನಿಯಂತ್ರಣ ಸಂಸದೀಯ ಸಮಿತಿ ಒಲವು
ಹೊಸದಿಲ್ಲಿ,ಮಾ.20: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಒಟ್ಟಾರೆ ಗುರಿಗಳ ಸಾಧನೆಗಾಗಿ ಸರಕಾರದ ವಿವಿಧ ಅಂಗಗಳು ಮತ್ತು ಇತರ ಸಂಬಂಧಿತರು ಸಮನ್ವಯದಿಂದ ಕಾರ್ಯ ನಿರ್ವಹಿಸುವಂತಾಗಲು ನ್ಯಾಯಸಮ್ಮತ, ಪ್ರಾಯೋಗಿಕ ಮತ್ತು ಅನುಷ್ಠಾನ ಯೋಗ್ಯ ‘ರಾಷ್ಟ್ರೀಯ ತಂಬಾಕು ನಿಯಂತ್ರಣ ನೀತಿ ’ಯೊಂದನ್ನು ತುರ್ತಾಗಿ ರೂಪಿಸುವ ಅಗತ್ಯವಿದೆ ಎಂದು ದಿಲೀಪ್ ಗಾಂಧಿ ಅಧ್ಯಕ್ಷತೆಯ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ. ಕೊಟ್ಪಾ ಕುರಿತ ಈ ಸಮಿತಿಯು ಇತ್ತೀಚಿಗೆ ಲೋಕಸಭೆಯಲ್ಲಿ ತನ್ನ ವರದಿಯನ್ನು ಮಂಡಿಸಿದೆ.
ತಂಬಾಕು ಬಳಕೆ ಮಾದರಿ,ಕೃಷಿ ಉದ್ಯೋಗ,ರಫ್ತು ಸಾಮರ್ಥ್ಯ ಮತ್ತು ಆದಾಯ ಸೃಷ್ಟಿಯಂತಹ ವಿವಿಧ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸನ್ನಿವೇಶಕ್ಕೆ ಅನುಗುಣವಾಗಿ ರಾಷ್ಟ್ರೀಯ ತಂಬಾಕು ನಿಯಂತ್ರಣ ನೀತಿಯನ್ನು ರೂಪಿಸಬೇಕಾಗಿದೆ ಎಂದು ಸಮಿತಿಯು ಶಿಫಾರಸು ಮಾಡಿದೆ.
ತಂಬಾಕು ನಿಯಂತ್ರಣದ ಗುರಿಗಳನ್ನು ಸಾಧಿಸುವಲ್ಲಿ ಸರಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಪ್ರಮುಖ ಕಾರಣವೆಂದು ಸಮಿತಿಯು ಅಭಿಪ್ರಾಯ ವ್ಯಕ್ತಪಡಿಸಿದೆ.
Next Story





