ಪಕ್ಷದ ಸಂವಿಧಾನ ಪಾಲನೆ ಮೋದಿಗಿಂತ ವಾಜಪೇಯಿ ಅವಧಿಯೇ ಉತ್ತಮ

ಹೊಸದಿಲ್ಲಿ , ಮಾ. 21 : ಇತ್ತೀಚಿಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಲಾಯಿತು. ಆದರೆ ವಾಜಪೇಯಿ ಅವಧಿಯ ಹೋಲಿಕೆಯಲ್ಲಿ ಈಗ ಮೋದಿ ಯುಗದಲ್ಲಿ ಬಿಜೆಪಿಯೊಳಗೆ ಆಂತರಿಕ ಚರ್ಚೆ ನಡೆಸುವ ಸಾಂಸ್ಥಿಕ ವ್ಯವಸ್ಥೆ ಸಾಕಷ್ಟು ದುರ್ಬಲವಾಗಿದೆ ಎಂಬುದನ್ನು ವಾಸ್ತವಗಳು ತಿಳಿಸುತ್ತವೆ.
ವಾಜಪೇಯಿ ಅವರ ಪೂರ್ಣ ಅವಧಿಯ ಎರಡು ಸರಕಾರಗಳ ಅವಧಿ (ಅಕ್ಟೋಬರ್ 1999- ಮೇ 2004) ಹಾಗು ನರೇಂದ್ರ ಮೋದಿ ಅವರ ಅವಧಿ ( ಮೇ 2014 ರಿಂದ ಈವರೆಗೆ) ಗಳನ್ನು ಹೋಲಿಸಿದರೆ ವಾಜಪೇಯಿ ಅವಧಿಯಲ್ಲೇ ಪಕ್ಷದ ಸಂವಿಧಾನವನ್ನು ಪ್ರಾಮಾಣಿಕವಾಗಿ ಅನುಸರಿಸಿದ್ದು ಕಂಡು ಬರುತ್ತದೆ.
ವಾಜಪೇಯಿ ಅವರು ಪ್ರಧಾನಿಯಾಗಿ ಪೂರ್ಣ ಅವಧಿಗೆ ಪುನರಾಯ್ಕೆಯಾದ ಮೇಲೆ 1999 ರ ಕೊನೆ ಹಾಗು 2001 ರ ಅಂತ್ಯದಲ್ಲಿ ( ಮೊದಲ ಎರಡು ವರ್ಷಗಳು ) ಪಕ್ಷದ 6 ರಾಷ್ಟ್ರೀಯ ಕಾರ್ಯಕಾರಿಣಿಗಳು ನಡೆದಿವೆ. ಆದರೆ ಮೋದಿ ಅವರು ಪ್ರಧಾನಿಯಾದ ಮೇಲೆ ಎರಡು ವರ್ಷಗಳಲ್ಲಿ ಕೇವಲ 3 ರಾಷ್ಟ್ರೀಯ ಕಾರ್ಯಕಾರಿಣಿಗಳು ನಡೆದಿವೆ.
ಪಕ್ಷದ ಸಂವಿಧಾನದ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಾಗು ವರ್ಷಕ್ಕೆ ಒಮ್ಮೆ ರಾಷ್ಟ್ರೀಯ ಸಮಿತಿ ಸಭೆ ನಡೆಯಬೇಕು. ಆದರೆ ಇದಕ್ಕೆ ತದ್ವಿರುದ್ಧವಾಗಿ ಈ ಬಿಜೆಪಿ ಸರಕಾರ ಬಂದ ಮೇಲೆ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಆಗಸ್ಟ್ 2014, ಎಪ್ರಿಲ್ 2015 ಹಾಗು ಮಾರ್ಚ್ 2016 ರಲ್ಲಿ ಮಾತ್ರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿದೆ.







