ವಿದ್ಯಾರ್ಥಿನಿಗೆ ವಂಚನೆ ಪ್ರಕರಣ: ಆರೋಪಿಗೆ 3 ವರ್ಷ ಶಿಕ್ಷೆ;20 ಸಾವಿರ ದಂಡ
ಮಂಗಳೂರು, ಮಾ. 21: ಕಾಲೇಜು ವಿದ್ಯಾರ್ಥಿನಿಯಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟು ಉಡುಪಿ ಜಿಲ್ಲೆ ಬೆಳ್ಮಣ್ ಸಮೀಪದ ಸಾಂತೂರಿನ ಮಹೇಶ್ ಸಾಲ್ಯಾನ್ (24) ಗೆ ಮಂಗಳೂರಿನ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಟ್ಟು 3 ವರ್ಷ ನಾಲ್ಕು ತಿಂಗಳು ಕಠಿಣ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಡಿ.ಟಿ. ಪುಟ್ಟರಂಗಸ್ವಾಮಿ ತೀರ್ಪು ಪ್ರಕಟಿಸಿದ್ದಾರೆ.
ಆರೋಪಿಯು ವಿದ್ಯಾರ್ಥಿನಿಯ ಬಳಿ ಹಣ ಪಡೆದು ಉದ್ಯೋಗ ನೀಡುವುದಾಗಿ ನಂಬಿಸಿ ವಂಚಿಸಿ, ಅಂಕಪಟ್ಟಿ ಫೋರ್ಜರಿ ನಡೆಸಿದ್ದು ವಿಚಾರಣೆಯಲ್ಲಿ ಸಾಬಿತಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯ ಆರೋಪಿಗೆ ಶಿಕ್ಷೆ ಪ್ರಕಟಿಸಿತು. ಆರೋಪಿಯು ಈಗಾಗಲೆ 13 ತಿಂಗಳು ಸಜೆ ಅನುಭವಿಸಿರುವುದರಿಂದ ಇನ್ನು 27 ತಿಂಗಳು ಸಜೆ ಅನುಭವಿಸಬೇಕಾಗಿದೆ.
ಉದ್ಯೋಗ ನೀಡುವುದಾಗಿ ವಂಚಿಸಿದ ಪ್ರಕರಣಕ್ಕೆ ಮತ್ತು ಅಂಕಪಟ್ಟಿ ಫೋರ್ಜರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ತಲಾ ಒಂದು ವರ್ಷ 8 ತಿಂಗಳು ಕಠಿಣ ಸಜೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ 2 ತಿಂಗಳ ಸಾದಾ ಸಜೆ ವಿಧಿಸಲಾಗಿದೆ. ದಂಡದಲ್ಲಿ 15 ಸಾವಿರ ರೂ.ವನ್ನು ಸಂತ್ರಸ್ತೆಗೆ ನೀಡಬೇಕು. ಎರಡೂ ಪ್ರಕರಣದ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆ. ಸಂತ್ರಸ್ತೆ ಸರ್ಕಾರದ ನೆರವು ಪಡೆಯಲು ಅರ್ಹಳು ಎಂದು ತೀರ್ಪಿನಲ್ಲಿ ಆದೇಶಿಸಲಾಗಿದೆ.
ಅಪರಾಧಿಯು ಉದ್ಯೋಗ ನೀಡುವುದಾಗಿ ಸಂತ್ರಸ್ತ ವಿದ್ಯಾರ್ಥಿನಿಯಿಂದ 1.15 ಲಕ್ಷ ರೂ. ಹಣ ಪಡೆದುಕೊಂಡು ವಂಚಿಸಿದ ಬಗ್ಗೆ, ಅಂಕ ಪಟ್ಟಿ ಪೋರ್ಜರಿ ನಡೆಸಿದ ಬಗ್ಗೆ ಹಾಗೂ ಅತ್ಯಾಚಾರ ನಡೆಸಿದ ಬಗ್ಗೆ ದೂರು ದಾಖಲಾಗಿತ್ತು. ಆರೋಪಿಯು ಹಣ ಪಡೆದು ವಂಚಿಸಿರುವುದು ಮತ್ತು ಅಂಕ ಪಟ್ಟಿ ಪೋರ್ಜರಿ ನಡೆಸಿರುವುದು ನ್ಯಾಯಾಲಯದ ವಿಚಾರಣೆ ವೇಳೆ ಸಾಬೀತಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತಾ ವಾದ ಮಂಡಿಸಿದ್ದರು.





