ಉಳ್ಳಾಲ :ಟಿಪ್ಪರ್ ಢಿಕ್ಕಿ- ಬೈಕ್ ಸವಾರರಿಬ್ಬರು ಮೃತ್ಯು
ಪರಾರಿಯಾಗಲೆತ್ನಿಸಿದ ಟಿಪ್ಪರ್ ಚಾಲಕನಿಗೆ ಸಾರ್ವಜನಿಕರಿಂದ ಮಾರಣಾಂತಿಕ ಹಲ್ಲೆ

ಉಳ್ಳಾಲ, ಮಾ.21: ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ಪರಾರಿಯಾಗಲೆತ್ನಿಸಿದ ಟಿಪ್ಪರ್ ಚಾಲಕನಿಗೆ ಸ್ಥಳೀಯರು ದೊಣ್ಣೆಯಿಂದ ತಲೆಗೆ ಹೊಡೆದ ಪರಿಣಾಮ ಆತನೂ ಗಂಭೀರ ಗಾಯಗೊಂಡಿರುವ ಘಟನೆ ಬಬ್ಬುಕಟ್ಟೆ ಸಮೀಪ ಸಂಭವಿಸಿದೆ. ಬೈಕ್ ಸವಾರರಾದ ಸಿನಾನ್ ಮತ್ತು ನೌಷಾದ್ ಮೃತಪಟ್ಟವರಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಇವರಿಬ್ಬರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಸಾರ್ವಜನಿಕರಿಂದ ಹಲ್ಲೆಗೊಳಗಾಗಿರುವ ಟಿಪ್ಪರ್ ಚಾಲಕ ಮದಕ ಅಂಬ್ಲಮೊಗರು ನಿವಾಸಿ ಅಮೀರ್ ಫಾರೂಕ್ (22) ಚಿಕಿತ್ಸೆ ಪಡೆಯುತ್ತಿದ್ದಾರೆ. ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಬೈಕ್‌ಗೆ ತೊಕ್ಕೊಟ್ಟು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಸಹಸವಾರ ಲಾರಿಯಡಿ ಸಿಲುಕಿದರೆ, ಸವಾರ ದೂರಕ್ಕೆ ಎಸೆಯಲ್ಪಟ್ಟಿದ್ದರು. ಘಟನೆ ನಡೆಯುತ್ತಿದಂತೆ ಟಿಪ್ಪರ್ ಚಾಲಕ ಅಮೀರ್ ಫಾರೂಕ್ ಲಾರಿಯಿಂದ ಇಳಿದು ಪರಾರಿಯಾಗಲು ಯತ್ನಿಸುತ್ತಿರುವುದನ್ನು ಕಂಡ ಸ್ಥಳೀಯರು ಮಾರಣಾಂತಿಕವಾಗಿ ಹಲ್ಲೆಗೈದಿದ್ದಾರೆ.





