ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಯುತ್ತಿರುವ ನಾಯಕರು!
ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದರಂತೆ! ಸಂತೆಗೆ ಮುಂಚೆ ಗಂಟುಕಳ್ಳರು ನೆರೆದರಂತೆ! ಈ ಎರಡೂ ಮಾತುಗಳು ಸದ್ಯಕ್ಕೆ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ತಮಿಳುನಾಡಿನ ರಾಜಕಾರಣಕ್ಕೆ ಮತ್ತು ಅಲ್ಲಿನ ರಾಜಕಾರಣಿಗಳ ಮನಸ್ಥಿತಿಗೆ ಬಹಳ ಚೆನ್ನಾಗಿ ಅನ್ವಯವಾಗುತ್ತವೆ. ಚುನಾವಣೆಗಳು ನಡೆಯುವುದಕ್ಕೆ ಮೊದಲೇ ಮುಂದಿನ ಮುಖ್ಯಮಂತ್ರಿಯ ಗಾದಿಯ ಬಗ್ಗೆ ತಲೆಕೆಡಿಸಿಕೊಂಡು ನಿದ್ದೆ ಮಾಡದೆ ಒದ್ದಾಡುತ್ತಿರುವ ರಾಜಕಾರಣಿಗಳ ಒಂದು ಪಡೆಯೆಅಲ್ಲಿರುವಂತೆ ಕಾಣುತ್ತಿದೆ. ಅಂತಹ ಮಹತ್ವಾಕಾಂಕ್ಷಿ ರಾಜಕಾರಣಿಗಳ ಬಗ್ಗೆ ಒಂದಿಷ್ಟು ನೋಡೋಣ:
ಕಳೆದ ಐದು ವರ್ಷಗಳಿಂದ( ನಡುವೆ ಒಂದೆರಡು ತಿಂಗಳನ್ನು ಬಿಟ್ಟು) ಮುಖ್ಯಮಂತ್ರಿಯಾಗಿರುವ ಜಯಲಲಿತಾರವರು ಸೋಲು ಕಾಣಲು ಸಾಧ್ಯವೇ ಇಲ್ಲ ಮತ್ತು ಮುಂದಿನ ಸರದಿಗೂ ತಾವೇ ಮುಖ್ಯಮಂತ್ರಿಯಾಗುತ್ತೇನೆಂಬ ಆತ್ಮವಿಶ್ವಾಸದಲ್ಲಿ ಬೀಗುತ್ತಿದ್ದಾರೆ. ಅವರ ಅಂತಹ ಮಹತ್ವಾಕಾಂಕ್ಷೆಗೆ ಕಾರಣವಿಲ್ಲದಿಲ್ಲ. ಯಾಕೆಂದರೆ ಅವರಿಗೆ ಸೋಲೊಡ್ಡಬಹುದಾಗಿದ್ದ ವಿರೋಧ ಪಕ್ಷಗಳು ತಮ್ಮ ಅಹಮ್ಮುಗಳನ್ನು, ಅಕಾರದಾಸೆಯ ಮೋಹವನ್ನೂ ಬಿಡಲಾಗದೆ, ಪರಸ್ಪರರ ಮೇಲಿನ ಅಪನಂಬಿಕೆಯಿಂದಾಗಿ ಬಹುತೇಕ ಪ್ರತ್ಯೇಕವಾಗಿಯೇಚುನಾವಣೆ ಎದುರಿಸಲು ಸಿದ್ಧವಾಗಿರುವುದು. ಇದರಿಂದಾಗಿ ಜಯ ಲಲಿತಾರವರು ಯಾವ ಆತಂಕವೂ ಇಲ್ಲದೆ ತಮ್ಮ ಪಾಡಿಗೆ ತಾವು ಜನಪ್ರಿಯ ಯೋಜನೆಗಳ ಘೋಷಣೆ ಮಾಡುತ್ತಾ ನಿರುಮ್ಮಳವಾಗಿರುವುದು. ಆದಾಯಕ್ಕೂ ಮೀರಿ ಆಸ್ತಿಗಳಿಸಿದ ಆರೋಪದ ಮೇಲೆ ಆಕೆ ಒಂದಿಷ್ಟು ದಿನ ಜೈಲಿಗೆ ಹೋಗಿಬಂದರಾದರೂ, ಅವರು ನಿರ್ದೋ ಶಿಯೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಆಕೆಗೆ ಅಂಟಿದ್ದ ಕಳಂಕವೂ ಬಹಳಷ್ಟು ದೂರವಾದಂತಾಯಿತು. ಜೊತೆಗೆ ಈ ಪ್ರಕರಣದ ಹಿಂದೆ ಡಿ.ಎಂ.ಕೆ. ಪಕ್ಷ ಮತ್ತು ಅದರ ನಾಯಕ ಕರುಣಾನಿಯವರ ಕೈವಾಡವಿದೆಯೆಂಬ ಜಯಲಲಿತಾ ಬೆಂಬಲಿಗರ ಪ್ರಚಾರ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಯಿತು. ಇದರಿಂದಾಗಿ ಅನಕ್ಷರಸ್ಥ ಮತ್ತು ಗ್ರಾಮೀಣ ಪ್ರದೇಶದ ಮತದಾರರಿಗೆ ಆಕೆಯ ಮೇಲೆ ಅನುಕಂಪವೂ ಉಂಟಾಯಿ ತೆನ್ನಬಹುದು. ಇದೆಲ್ಲದರ ಜೊತೆಗೆ ಕೆಳವರ್ಗದ ಜನತೆಗಾಗಿ ಜಾರಿಗೆ ತಂದ ಜನಪ್ರಿಯ ಯೋಜನೆಗಳು ಆಕೆಯ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುತ್ತಾ ಹೋಗಿವೆ. ಹಾಗಾಗಿ ಸದ್ಯಕ್ಕೆ ರಾಜಕೀಯ ವಲಯದ ಪ್ರಕಾರ ಅತ್ಯಂತ ಜನಪ್ರಿಯ ವ್ಯಕ್ತಿಯೆಂದರೆ ಅದು ಜಯಲಲಿತಾ ಮಾತ್ರ. ಇಂತಹ ಪರಿಸ್ಥಿತಿಯಲ್ಲಿರುವ ಆಕೆ ಮುಂದಿನ ಮುಖ್ಯಮಂತ್ರಿ ತಾನೇ ಎಂದು ನಂಬಿದ್ದರೆ ಅಚ್ಚರಿಯೇನಲ್ಲ.
ಆದರೆ ವಿರೋಧಪಕ್ಷಗಳ ಪರಿಸ್ಥಿತಿ ಹಾಗಿಲ್ಲ. ಅದ್ಯಾವ ಭರವಸೆಯಿಂದಾಗಿ ಅವರು ತಾವೇ ಮುಂದಿನ ಮುಖ್ಯಮಂತ್ರಿಯೆಂಬ ಭ್ರಮೆಯಲ್ಲಿದ್ದಾರೊ ಗೊತ್ತಾಗುತ್ತಿಲ್ಲ. ಉದಾಹರಣೆಗೆ ನೋಡಿ, ಕಳೆದ ಬಾರಿ ಹೀನಾಯವಾಗಿ ಸೋಲನ್ನಪ್ಪಿದ ಕರುಣಾನಿಯವರ ಡಿ.ಎಂ.ಕೆ. ನಂತರವಾದರು ಚೇತರಿಸಿಕೊಂಡಿತೇ ಎಂದರೆ ಅದೂ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ (2014) ಅದರದು ಅತ್ಯಂತ ಕಳಪೆ ಪ್ರದರ್ಶನ! ಇನ್ನು ಕರುಣಾನಿಯವರಿಗೀಗ 92 ವರ್ಷ ವಯಸ್ಸು. ಈ ಇಳಿವಯಸ್ಸಿನಲ್ಲಿಯೂ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಮೆರೆಯುವ ಆಸೆ ಹೋಗಿಲ್ಲ. ಅದೂ ಅಲ್ಲದೆ ಇದೀಗ ಅವರ ಪಕ್ಷದಲ್ಲಿ ಅವರ ಮಗ ಎಂ.ಕೆ.ಸ್ಟಾಲಿನ್ ಸಹ ಮುಖ್ಯಮಂತ್ರಿಯ ಗಾದಿಯ ಮೇಲೆ ಕಣ್ಣಿಟ್ಟು ಕೂತಿದ್ದಾರೆ. ಈ ವಿಚಾರದಲ್ಲಿ ತಂದೆಮಗನ ನಡುವೆ ಯಾವುದೇ ಭಿನ್ನಮತವಿನ್ನೂ ತಲೆದೋರಿಲ್ಲವಾದರು ಅಕಸ್ಮಾತ್ ನಾಳೆಯೇನಾದರು ಅಕಾರಕ್ಕೇರುವ ಸಂದರ್ಭ ಬಂದೊದಗಿದರೆ ಇವರಿಬ್ಬರ ನಡುವೆ ಭಿನ್ನಮತ ಸ್ಫೋಟಗೊಳ್ಳುವುದು ಗ್ಯಾರಂಟಿ. ಯಾಕೆಂದರೆ ಈ ತಲೆಮಾರಿನ ಯುವಪೀಳಿಗೆಯ ಕಾರ್ಯಕರ್ತರು ಮತ್ತು ಎರಡನೆ ಸಾಲಿನ ಬಹುತೇಕ ನಾಯಕರು ಸ್ಟಾಲಿನ್ ಪರವಾಗಿದ್ದರೆ, ಹಳೆಯ ತಲೆಮಾರಿನ ನಾಯಕರು ಮತ್ತು ಕಾರ್ಯಕರ್ತರು ಇಂದಿಗೂ ಕರುಣಾನಿಯವರನ್ನೇ ಬೆಂಬಲಿಸುತ್ತಾರೆ. ಆದರೆ ಡಿ.ಎಂ.ಕೆ. ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ತೀರಾ ಕಡಿಮೆಯಿದೆ. ಮಾಮೂಲಿನಂತೆ ಅದು ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಅದು ಕಾಂಗ್ರೆಸ್ಸಿಗೆ ಅನುಕೂಲವಾಗಬಹುದೇ ಹೊರತು, ಕಾಂಗ್ರೆಸ್ಸಿನಿಂದ ಡಿ.ಎಂ.ಕೆ ಪಕ್ಷಕ್ಕೆ ನಯಾ ಪೈಸೆಯ ಲಾಭವೂ ಇಲ್ಲವೆಂಬುದು ರಾಜಕೀಯ ಪಂಡಿತರ ಅನಿಸಿಕೆಯಾಗಿದ್ದು. ಅದು ಸತ್ಯವೂ ಆಗಿದೆ. ಯಾಕೆಂದರೆ ಅಕಸ್ಮಾತ್ ಗೆದ್ದರೆ ಮುಖ್ಯ ಮಂತ್ರಿಯಿರಲಿ, ಕನಿಷ್ಠ ಸಚಿವನೂ ಆಗಲು ತೊಡೆತಟ್ಟಬಲ್ಲ ಒಬ್ಬನೇ ಒಬ್ಬ ಗಟ್ಟಿ ನಾಯಕ ಕಾಂಗ್ರೆಸ್ಸಿನಲ್ಲಿ ಇಲ್ಲ. ಹೀಗಾಗಿ ಕರುಣಾನಿಯಾಗಲಿ, ಸ್ಟಾಲಿನ್ ಆಗಲಿ ಮುಖ್ಯಮತ್ರಿಯಾಗುವ ಕನಸು ಕಾಣುವುದು ವ್ಯರ್ಥ ವೆಂದು ನನ್ನ ಭಾವನೆ. ಅದರಲ್ಲೂ ಡಿ.ಎಂ.ಡಿ.ಕೆ.ಯ ಜೊತೆಗಿನ ಮೈತ್ರಿಯ ಮಾತುಕತೆ ಮುರಿದು ಬಿದ್ದ ನಂತರ ಡಿ.ಎಂ.ಕೆ.-ಕಾಂಗ್ರೆಸ್ ಮೈತ್ರಿಕೂಟಕ್ಕೆ ಯಾವುದೇ ಅವಕಾಶ ಸಿಗುವುದು ಸಾಧ್ಯವಿಲ್ಲ.
ಇನ್ನು ಡಿ.ಎಂ.ಡಿ.ಕೆ. ಯ ವಿಜಯಕಾಂತ್ ಡಿ.ಎಂ.ಕೆ.ಯೊಂದಿಗೆ ಮಾತುಕತೆ ನಡೆಸುತ್ತಿರುವಾಗಲೇ ಏಕಾಏಕಿ ಮಾತುಕತೆಯಿಂದ ಹೊರಬಿದ್ದು ತಮ್ಮ ಪಕ್ಷ ಒಂಟಿಯಾಗಿ ಚುನಾವಣೆ ಎದುರಿಸುವುದಾಗಿ ನೀಡಿದ ಹೇಳಿಕೆಯ ಹಿಂದಿದ್ದುದು ತಾವೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂಬ ಅವರ ಮಹತ್ವಾಕಾಂಕ್ಷೆಯೇ! ಕಾರ್ಯಕರ್ತರ ಸಭೆಯಲ್ಲಿ ಮಾತಾಡುತ್ತಾ ಅವರು, ಜನತೆ ವಿಜಯಕಾಂತ್ ಯಾರ ಜೊತೆಗೂ ಹೋಗಲಿ ಎಂದು ಬಯಸದೆ ಸ್ವತಂತ್ರವಾಗಿ ಮುಖ್ಯಮಂತ್ರಿಯಾಗಲಿ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನಾವು ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಎಲ್ಲ ಕ್ಷೇತ್ರದಲ್ಲಿ ಸ್ಪರ್ಸುತ್ತೇವೆಂದು ಹೇಳಿಕೊಂಡು ತಾವೇ ಮುಖ್ಯಮಂತ್ರಿಯಾಗುವ ತಮ್ಮ ಮಹತ್ವಾಕಾಂಕ್ಷೆ ಯನ್ನು ಜಗಜ್ಜಾಹೀರು ಮಾಡಿದರು. ಜಯಲಲಿತಾ ಮತ್ತು ಕರುಣಾ ನಿಯವರ ನಡುವಿನ ಹೋರಾಟದಲ್ಲಿ ಜನತೆ ತಮ್ಮನ್ನು ಮೂರನೆ ಪರ್ಯಾಯ ನಾಯಕನೆಂದು ಗುರುತಿಸಬಹುದೆಂಬ ಆತ್ಮವಿಶ್ವಾಸ ವಿಜ ಯಕಾಂತರಿಗಿದ್ದರೆ ತಪ್ಪೇನು ಅಲ್ಲ. ಜೊತೆಗೆ ಸಿನೆಮಾವನ್ನೇ ಉಸಿರಾಡುವ ತಮಿಳುನಾಡಿನ ಮತದಾರರು ಯಾವ ನಿರ್ಧಾರ ಕೈಗೊಂಡರೂ ಅದು ಸಿನಿಮೀಯವೇ ಆಗಿರುತ್ತದೆ ಎಂಬುದಂತು ಖಚಿತ.
ಇಂತಹುದೇ ಮಹತ್ವಾಕಾಂಕ್ಷೆಹೊಂದಿ ತನ್ನ ರಾಜಕೀಯ ದಾಳಗಳನ್ನು ಉರುಳಿಸುತ್ತಿರುವ ಮತ್ತೊಬ್ಬ ನಾಯಕನೆಂದರೆ ಅದು ಎಂಡಿಎಂ ಕೆ.ಯ ವೈಕೊ ಅವರು! ಇಂತಹ ಮಹತ್ವಾಕಾಂಕ್ಷೆಯ ಹಿನ್ನೆಲೆಯಲ್ಲಿಯೇ ಅವರು ಡಿಎಂಕೆಯ ಸಾಂಗತ್ಯವನ್ನುತೊರೆದು ಪೀಪಲ್ಸ್ ವೆಲ್‌ಫೇರ್ ಫ್ರಂಟ್(ಪಿಡಬ್ಯ್ಲುಎಫ್) ಅನ್ನು ಸ್ಥಾಪಿಸಿಕೊಂಡು ಚುನಾವಣೆಗೆ ಸನ್ನದ್ಧ ರಾಗಿದ್ದಾರೆ. ಅವರ ಪಿಡಬ್ಯ್ಲೂಎಫ್‌ನಲ್ಲಿ ಎರಡೂ ಎಡಪಕ್ಷಗಳು, ಹಾಗೂ ದಲಿತ ನಾಯಕರಾದ ತಿರುಮವಲನ್ ಅವರ ವಿಸಿಕೆ ಪಕ್ಷಗಳು ಸೇರಿಕೊಂಡಿವೆ. ಅತ್ತ ವೈಕೊರವರು ತಾವೇ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದರೆ, ಇತ್ತ ವಿಸಿಕೆಯ ಮಹಾಕಾರ್ಯದರ್ಶಿ ರವಿ ಕುಮಾರ್ ಮತ್ತು ಜಂಟಿ ಕಾರ್ಯದರ್ಶಿಯಾದ ಎಸ್.ಎಸ್. ಬಾಲಾಜಿ ಯವರು ಮಾತ್ರ ವಿಸಿಕೆಯ ಅಧ್ಯಕ್ಷರಾದ ತಿರುಮವಲನ್ ಅವರೇಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿದ್ದಾರೆ. ಈ ಗೊಂದಲ ದ ನಡುವೆಯೇ ಎರಡೂ ಎಡಪಕ್ಷಗಳು ಚುನಾವಣೆ ಎದುರಿಸಬೇಕಾಗಿಬಂದಿದೆ. ದಲಿತ ವ್ಯಕ್ತಿಯೊಬ್ಬರು ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ವಿಸಿಕೆಯ ನಾಯಕರು ಇಂತಹದೊಂದು ಘೋಷಣೆ ಮಾಡಿರುವುದು ವಿಶೇಷವೇನಲ್ಲ.
ಇನ್ನು ವನ್ನಿಯಾರ್ ಜನಾಂಗದ ಪ್ರಮುಖ ಮತ್ತು ಪ್ರಭಾವಿ ನಾಯಕರಾದ ಅನ್ಬುಮಣಿ ರಾಮದಾಸ್ ಅವರ ಪಿಎಂಕೆ ಕೂಡ ಈ ಬಾರಿಯ ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದು. ರಾಮದಾಸ್ ಸ್ವತಃ ತಾನೇ ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿಕೊಂಡಿದ್ದಾರೆ.ಆದರೆ ರಾಜ್ಯದ ಉತ್ತರಭಾಗದಲ್ಲಿ ಮಾತ್ರ ಪ್ರಭಾವ ಹೊಂದಿರುವ ರಾಮದಾಸರ ಇಚ್ಛೆ ಈಡೇರುವುದು ಕಷ್ಟ.
ಆದರೆ ಇದೇ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಯ ಚುನಾವಣೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಗುರಿಯೇ ಬೇರೆ ಇದೆ. ಕನಿಷ್ಠ 70 ಸ್ಥಾನಗಳನ್ನಾದರು ಅದು ಗೆಲ್ಲುವ ಗುರಿಯಿಟ್ಟುಕೊಂಡಿದ್ದು, ಅತಂತ್ರ ವಿಧಾನಸಭೆಯೇನಾದರು ಸೃಷ್ಟಿಯಾದರೆ ಕಿಂಗ್ ಮೇಕರ್ ಪಾತ್ರ ನಿರ್ವಹಿಸುವ ನಿರೀಕ್ಷೆಯಲ್ಲಿದೆ. ವಿಪಯ್ಯಿಸವೆಂದರೆ ಸದ್ಯ ತಾನು ಮುಂದಿನ ಮುಖ್ಯಮಂತ್ರಿಯೆಂದು ಎದೆತಟ್ಟಿ ಹೇಳಿಕೊಳ್ಳಬಲ್ಲ ನಾಯಕರ್ಯಾರು ಬಿಜೆಪಿಯಲ್ಲಿ ಇಲ್ಲ. ಹೀಗೆ ವಿರೋಧಪಕ್ಷಗಳ ನಾಯಕರು ತಮ್ಮನ್ನು ತಾವೇ ಮುಂದಿನ ಮುಖ್ಯಮಂತ್ರಿಗಳೆಂದು ಬಿಂಬಿಸಿಕೊಳ್ಳುತ್ತಿರುವಾಗ ಜಯಲಲಿತಾ ಮಾತ್ರ ಯಾವುದೇ ಗೊಂದಲವಿರದೆ ಇನ್ನೊಂದು ಅವಯಲ್ಲಿಯೂ ಅಕಾರ ಹಿಡಿಯುವ ಆತ್ಮವಿಶ್ವಾಸದಲ್ಲಿದ್ದಾರೆ.
ನಾವೇನೇ ರಾಜಕೀಯ ವಿಶ್ಲೇಷಣೆಗಳನ್ನು ಮಾಡಿದರೂ ತಮಿಳುನಾಡಿನ ರಾಜಕೀಯಕ್ಕೂ ಅಲ್ಲಿನ ಸಿನೆಮಾಗಳಿಗೂ ಅಷ್ಟೇನು ಅಂತರವಿರುವುದಿಲ್ಲ. ಹೀಗಾಗಿ ಕ್ಲೆಮಾಕ್ಸ್ ನೋಡಲು ಲಿತಾಂಶ ಬರುವವರೆಗು ಕಾಯಬೇಕಷ್ಟೇ!







