ಮೊರಾರ್ಜಿ ದೇಸಾಯಿ ಶಾಲಾ ಶಿಕ್ಷಕರ ಸೇವಾ ಭದ್ರತೆಗೆ ಆಗ್ರಹ
ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು, ಮಾ. 21: ಸರಕಾರಿ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ವರ್ಗ, ಪ್ರಾಂಶುಪಾಲರು ಹಾಗೂ ಬೋಧಕೇತರ ಸಿಬ್ಬಂದಿಗೆ ಶೀಘ್ರವಾಗಿ ಸೇವಾ ಭದ್ರತೆ ಒದಗಿಸ ಬೇಕೆಂದು ಆಗ್ರಹಿಸಿ ಶಿಕ್ಷಕ ಸಿಬ್ಬಂದಿಯವರು ಬೃಹತ್ ಪ್ರತಿಭಟನೆ ನಡೆಸಿದರು.
ಸೋಮವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರ ಮತ್ತು ಶಿಕ್ಷಕೇತರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲಾ ಶಿಕ್ಷಕರಿಗೆ ಸೂಕ್ತ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿೆ ಕೈಗೊಂಡಿದ್ದಾರೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆ ಅಧ್ಯಕ್ಷ ಎಸ್.ರಾಘವೇಂದ್ರ, ಕರ್ನಾಟಕದಲ್ಲಿ 23 ವಸತಿ ಶಾಲೆಗಳಿದ್ದು, ಗುತ್ತಿಗೆ ಆಧಾರದಲ್ಲಿ 59 ಪ್ರಾಂಶುಪಾಲರು, 409 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, 2012ರಲ್ಲಿ ನ್ಯಾಯಾಲಯದ ಆದೇಶದಂತೆ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ಖಾಯಂ ಮಾಡಲಾಗಿದೆ.
ಇನ್ನುಳಿದ ಶಿಕ್ಷಕರನ್ನು ಕೆಲಸದಿಂದ ತೆಗೆಯದೆ ಅವರನ್ನು ಅದೇ ಸೇವೆಯಲ್ಲಿ ಮುಂದುವರಿಸಿ ಶೀಘ್ರದಲ್ಲಿಯೇ ಖಾಯಂಗೊಳಿಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವ ಬೇಡಿಕೆಗೂ ಕ್ರಮ ಕೈಗೊಳ್ಳದ ಕಾರಣ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ ಎಂದು ಹೇಳಿದರು.
ಹೈಕೋರ್ಟ್ ಆದೇಶದಂತೆ ಶೇ.5 ರಷ್ಟು ಕೃಪಾಂಕ ನೀಡಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದ ಅವರು, ವಯೋಮಿತಿ ಮೀರಿದ ಪ್ರಾಂಶುಪಾಲ ಹಾಗೂ ಶಿಕ್ಷಕರಿಗೆ ಬೇರೆ ಎಲ್ಲೂ ಉದ್ಯೋಗ ಅವಕಾಶ ದೊರೆಯುವುದಿಲ್ಲ. ಹೀಗಾಗಿ, ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಮತ್ತು ವೇತನ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆ ಕಾರ್ಯದರ್ಶಿ ಕುಮಾರಸ್ವಾಮಿ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರಮೂರ್ತಿ, ಎಸ್‌ಎಫ್‌ಐ ಮುಖಂಡರಾದ ವಿ.ಅಂಬರೀಶ್, ಗುರುರಾಜ್ ದೇಸಾಯಿ, ಬಸವರಾಜ ಪೂಜಾರ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.
ಮಕ್ಕಳ ಹಿತಕ್ಕೆ ಬದ್ಧರಾದ ಶಿಕ್ಷಕರು
ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆ ಯುತ್ತಿದ್ದು, ಅವರಿಗೆ ತೊಂದರೆ ಯಾಗಬಾರದು ಎಂಬ ಉದ್ದೇಶ ದಿಂದಾಗಿ ಅರ್ಧಕ್ಕೆ ಅರ್ಧದಷ್ಟು ಶಿಕ್ಷಕರು ಪಾಲ್ಗೊಳ್ಳದೆ, ಮಕ್ಕಳ ಭವಿಷ್ಯದ ಹಿತ ಕಾಪಾಡಲು ಶಿಕ್ಷಕರು ಮುಂದಾಗಿದ್ದಾರೆ. ಅಲ್ಲದೆ, ಮಕ್ಕಳ ಪರೀಕ್ಷೆ ಮುಗಿದ ನಂತರ ಪೂರ್ಣ ಪ್ರಮಾಣದಲ್ಲಿ ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಅನಿರ್ದಿಷ್ಟಾವಧಿ ಧರಣಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.







