ಲೋಕಾಯುಕ್ತ ಸಂಸ್ಥೆಯ ಜೀವಂತ ಕಗ್ಗೊಲೆ: ಶೆಟ್ಟರ್ ಆರೋಪ
ಭ್ರಷ್ಟಾಚಾರ ನಿಗ್ರಹ ದಳ ರಚನೆ

ಬೆಂಗಳೂರು, ಮಾ. 21: ಭ್ರಷ್ಟಾಚಾರ ನಿಯಂತ್ರಣಕ್ಕೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದ ಲೋಕಾಯುಕ್ತ ಸಂಸ್ಥೆಯನ್ನು ರಾಜ್ಯ ಸರಕಾರ ‘ಭ್ರಷ್ಟಾಚಾರ ನಿಗ್ರಹ ದಳ’(ಎಸಿಬಿ) ರಚನೆ ಮಾಡುವ ಮೂಲಕ ಜೀವಂತ ಕಗ್ಗೊಲೆ ಮಾಡಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ವಿಧಾನಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಜಗದೀಶ್ ಶೆಟ್ಟರ್ ನಿಲುವಳಿ ಸೂಚನೆಯಡಿ ‘ಎಸಿಬಿ’ ವಿಚಾರ ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಿದರು.
ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ‘ರಾಜ್ಯ ಸರಕಾರಕ್ಕೆ ಕಾನೂನಿನ ಅರಿವೇ ಇಲ್ಲ. ಕಾನೂನು ಇಲಾಖೆ, ಮತ್ತದರ ಕಾರ್ಯದರ್ಶಿಗಳೇನು ಮಾಡುತ್ತಿದ್ದಾರೋ ತಿಳಿಯದು. ಸುಪ್ರೀಂ ಕೋರ್ಟಿನ ಆದೇಶವನ್ನೇ ಸರಕಾರ ಸರಿಯಾಗಿ ಗ್ರಹಿಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಲೋಕ’ ಮುಚ್ಚುವ ಹುನ್ನಾರ: ರಾಜ್ಯ ಸರಕಾರ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಭ್ರಷ್ಟಾಚಾರ ನಿಗ್ರಹ ದಳ ರಚನೆಗೆ ಮುಂದಾಗಿದೆ. ಅಲ್ಲದೆ, ಲೋಕಾಯುಕ್ತ ಸಂಸ್ಥೆ ರಾಜ್ಯ ಸರಕಾರಕ್ಕೆ ಬೇಕಿಲ್ಲ. ಹೀಗಾಗಿ ಆ ಸಂಸ್ಥೆಗೆ ಬೀಗ ಹಾಕಲು ಸಿದ್ಧತೆ ನಡೆಸಿದೆ ಎಂದು ದೂರಿದರು.
ರಾಜ್ಯ ಸರಕಾರ ತರಾತುರಿಯಲ್ಲಿ ಆದೇಶದ ಮೂಲಕ ರಚಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಾಸ್ತವದಲ್ಲಿ ಭ್ರಷ್ಟಾಚಾರ ರಕ್ಷಣಾ ದಳ (ಎಪಿಬಿ) ವಾಗಿದೆ ಎಂದು ಲೇವಡಿ ಮಾಡಿದ ಶೆಟ್ಟರ್, ಲೋಕಾಯುಕ್ತ ಸಂಸ್ಥೆಗೆ ಮುಖ್ಯಸ್ಥರನ್ನೇ ನೇಮಿಸಿಲ್ಲ ಎಂದು ಟೀಕಿಸಿದರು.
1998ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮುಂದಿಟ್ಟುಕೊಂಡು ಇದೀಗ ಭ್ರಷ್ಟಾಚಾರ ನಿಗ್ರಹ ದಳ ರಚಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಶೆಟ್ಟರ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಸಂಸ್ಥೆಯನ್ನು ತನ್ನ ಕೈಗೊಂಬೆ ಮಾಡಿಕೊಳ್ಳುವ ಮೂಲಕ ಭ್ರಷ್ಟರ ರಕ್ಷಣೆ ಹಾಗೂ ಸರಕಾರದ ವಿರುದ್ಧ ಧ್ವನಿ ಎತ್ತುವ ಅಧಿಕಾರಿಗಳನ್ನು ಮಟ್ಟ ಹಾಕಲು ಸಂಚು ರೂಪಿಸಿದೆ ಎಂದು ವಾಗ್ದಾಳಿ ನಡೆಸಿದರು.
ಸಲಹಾ ಮಂಡಳಿ ‘ಕಿಚನ್ ಕ್ಯಾಬಿನೆಟ್’: ‘ಸಲಹೆಗಾರರಿಂದ’ ಈ ಸರಕಾರ ಸುಖಾ ಸುಮ್ಮನೆ ಅಡಕತ್ತರಿಯಲ್ಲಿ ಸಿಲುಕಿಕೊಳ್ಳುತ್ತಿದೆ ಎಂದು ಕೆಂಪಯ್ಯನವರ ಹೆಸರು ಉಲ್ಲೇಖಿಸದ ಜಗದೀಶ್ ಶೆಟ್ಟರ್, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಒಂದು ಸಲಹಾ ಮಂಡಳಿ ರಚನೆ ಪ್ರಸ್ತಾಪಿಸಿ, ಅನುಭವಶೀಲ ಉನ್ನತ ಖ್ಯಾತ ವ್ಯಕ್ತಿಗಳು ಎಂದರೆ ಯಾರು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಗೃಹ ಸಚಿವರು, ಗೃಹ ಇಲಾಖೆ ಕಾರ್ಯದರ್ಶಿ, ಡಿಜಿಪಿ-ಐಜಿಪಿ ಸೇರಿ ಸಲಹಾ ಮಂಡಳಿಯಲ್ಲಿ ಅಧಿಕಾರಿಗಳಿಲ್ಲ. ಬದಲಿಗೆ ಹೊರ ವ್ಯಕ್ತಿಗಳಿಗೆ ಮಹತ್ವ ನೀಡುವ ಅಗತ್ಯವೇನು ಎಂದು ಪ್ರಶ್ನಿಸಿದ ಅವರು, ಭ್ರಷ್ಟಾಚಾರ ನಿಗ್ರಹ ದಳ ರಚನೆ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೂಲೆ. ಕೂಡಲೇ ಈ ಆದೇಶವನ್ನು ರಾಜ್ಯ ಸರಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.





