ಸಂವೇದನಾಶೀಲತೆ ಕಳೆದುಕೊಂಡ ಸರಕಾರ: ವೈಎಸ್‌ವಿ ದತ್ತ

ಬೆಂಗಳೂರು, ಮಾ.21: ರಾಜ್ಯ ಸರಕಾರವು 1998ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಮುಂದಿಟ್ಟುಕೊಂಡು ಎಸಿಬಿ ರಚನೆ ಮಾಡುವ ಮೂಲಕ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈಎಸ್‌ವಿ ದತ್ತ ಆರೋಪಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ಮಾತ ನಾಡಿದ ಅವರು, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಮಾಡುವುದಕ್ಕಿಂತ ಮುಂಚಿತವಾಗಿ ವಿರೋಧ ಪಕ್ಷ ಗಳ ಮುಖಂಡರು ಸೇರಿದಂತೆ ಇನ್ನಿತರ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆ ಯಬೇಕಿತ್ತು. ಆದರೆ, ಈ ಸರಕಾರ ವಿನಮ್ರತೆ, ಸಂವೇದನಾಶೀಲತೆಯನ್ನು ಕಳೆದುಕೊಂಡಿದೆ ಎಂದು ಟೀಕಿಸಿದರು.
ಲೋಕಾಯುಕ್ತ ನ್ಯಾಯಮೂರ್ತಿ ಯಾಗಿದ್ದ ಭಾಸ್ಕರ್‌ರಾವ್ ಪ್ರಕರಣದಲ್ಲಿ ಇಡೀ ಸದನ ಒಂದು ಧ್ವನಿಯಾಗಿ ಕೆಲಸ ಮಾಡಿತ್ತು. ಲೋಕಾಯುಕ್ತ ಸಂಸ್ಥೆಯನ್ನು ಸಬಲೀಕರಣ ಮಾಡುವ ಭರವಸೆಯನ್ನು ಸರಕಾರ ನೀಡಿತ್ತು. ಆದರೆ, ಇದೀಗ ಅದು ಯಾವ ಪುಣ್ಯಾತ್ಮ ಈ ಎಸಿಬಿ ರಚನೆ ಮಾಡುವ ಸಲಹೆ ನೀಡಿದರೋ, ಅದು ಯಾವ ಬೋಧಿವೃಕ್ಷದ ಕೆಳಗಡೆ ಇವರಿಗೆ ಜ್ಞಾನೋದಯವಾಗಿದೆಯೊ ಗೊತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಮಾಡಿರುವ ಭಾಷಣ ವನ್ನು ಉಲ್ಲೇಖಿಸಿದ ದತ್ತ, ಭ್ರಷ್ಟಾಚಾರ ನಿರ್ಮೂಲನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಯಾವತ್ತೂ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಅವರು ಆತ್ಮ ಸಾಕ್ಷಿಗೆ ಅನುಗುಣವಾಗಿಯೆ ನಡೆಯು ತ್ತಾರೆ ಎಂಬುದು ನಮ್ಮ ಬಲವಾದ ವಿಶ್ವಾಸವಾಗಿದೆ ಎಂದರು.
ಎಸಿಬಿ ರಚನೆ ಮಾಡುವ ಮೂಲಕ ಸರಕಾರ ಲೋಕಾಯುಕ್ತ ಸಂಸ್ಥೆಗೆ ಮರಣಶಾಸನ ಬರೆದಿದೆ. ಭ್ರಷ್ಟಾಚಾರವನ್ನು ಹತ್ತಿಕ್ಕುವ ಕೆಲಸಕ್ಕೆ ಬಲ ನೀಡುವ ಬದಲು ಅದನ್ನು ದುರ್ಬಲಗೊಳಿಸಲಾಗಿದೆ. ಅಂತಿಮವಾಗಿ ಲೋಕಾಯುಕ್ತ ಸಂಸ್ಥೆ ಒಂದು ಅಸ್ಥಿಪಂಜರವಾಗಿ ಉಳಿಯಲಿದೆ ಎಂದು ದತ್ತ ಆತಂಕ ವ್ಯಕ್ತಪಡಿಸಿದರು.
ವೈಯಕ್ತಿಕವಾಗಿ ನನ್ನ ಕಡೆ, ರಾಜಕೀಯವಾಗಿ ಜೆಡಿಎಸ್ ಕಡೆ
ಎಸಿಬಿ ರಚನೆ ಕುರಿತು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಜೆಡಿಎಸ್ ಶಾಸಕ ವೈಎಸ್‌ವಿ ದತ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದತ್ತ ವೈಯಕ್ತಿಕವಾಗಿ ನನ್ನ ಕಡೆಯಿದ್ದಾರೆ. ಆದರೆ, ರಾಜಕೀಯ ವಾಗಿ ಮಾತ್ರ ಜೆಡಿಎಸ್ ಕಡೆಯಿದ್ದಾರೆ ಎಂದು ಹಾಸ್ಯಚಟಾಕಿ ಹಾರಿಸಿದರು.





