ನಾಲ್ಕು ತಿಂಗಳಲ್ಲಿ ಹೊರಗುತ್ತಿಗೆ ಕೆಲಸಗಾರರ ಖಾಯಮಾತಿ: ಎಚ್.ಆಂಜನೇಯ
ಬೆಂಗಳೂರು, ಮಾ.21: ಮೊರಾರ್ಜಿ ಹಾಗೂ ಇತರೆ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆಯ ಆಧಾರದಲ್ಲಿ ಕೆಲಸ ಮಾಡು ವವರನ್ನು ನಾಲ್ಕು ತಿಂಗಳಲ್ಲಿ ಖಾಯಂಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ. ಸೋಮವಾರ ವಿಧಾನ ಪರಿಷತ್‌ನ ಚುಕ್ಕೆ ಗುರುತಿನ ಪ್ರಶ್ನೆ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಸದ್ಯ ಮೊರಾರ್ಜಿ ಹಾಗೂ ಇತರೆ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ 1,241 ಶಿಕ್ಷಕರು ಮತ್ತು ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಇವರನ್ನು ಸಮಾಜ ಕಲ್ಯಾಣ ಇಲಾಖೆಯು ನಾಲ್ಕು ತಿಂಗಳಲ್ಲಿ ಖಾಯಂಗೊಳಿಸಿಕೊಳ್ಳಲಿದೆ ಎಂದು ಹೇಳಿದರು.
ಹೊರಗುತ್ತಿಗೆ ಆಧಾರದ ಶಿಕ್ಷಕರುಗಳಿಗೆ ಮಾಸಿಕವಾಗಿ ಕಾರ್ಮಿಕ ಇಲಾಖೆಯು 8 ಸಾವಿರ ರೂಪಾಯಿ ಹಾಗೂ ಇಎಸ್‌ಐ ಶೇ.1.75 ಮತ್ತು ಇಪಿಎಫ್ ಶೇ.12 ಪ್ಲಸ್ ಸೇವಾ ತೆರಿಗೆಯನ್ನು ಸೇರಿಸಿ ಪಾವತಿಸಲಾಗುತ್ತಿದ್ದು, ಹೊರ ಗುತ್ತಿಗೆ ಸಂಸ್ಥೆಗಳು ಇಎಸ್‌ಐ ಮತ್ತು ಇಪಿಎಫ್ ವಂತಿಕೆಗಳನ್ನು ಸಂಬಂಧಪಟ್ಟ ಇಲಾಖೆಗೆ ಪಾವತಿ ಮಾಡದಿದ್ದರೆ ಸಂಘಕ್ಕೆ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸ ಲಾಗುವುದು ಎಂದು ಹೇಳಿದರು.
ಅಲ್ಲದೆ, ಹೈಕೋರ್ಟ್‌ನ ಆದೇಶದಂತೆ 2011-12ನೆ ಸಾಲಿನಲ್ಲಿ(2010-11) ಕನಿಷ್ಠ ಒಂದು ವರ್ಷದ ಸತತ ಸೇವೆ ಸಲ್ಲಿಸಿದ ಹಾಗೂ ನೇರ ನೇಮಕಾತಿಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಹೊರಗುತ್ತಿಗೆ ಬೋಧಕ ಸಿಬ್ಬಂದಿಗಳಿಗೆ ಸೇವಾ ಕೃಪಾಂಕ ನೀಡಿ ಅರ್ಹ 552 ಶಿಕ್ಷಕರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.





