‘ಸಲಹಾ ಮಂಡಳಿ’ಯಲ್ಲಿ ಪಿಡಬ್ಲೂಡಿ ಮಂತ್ರಿ ಇರಬೇಕಿತ್ತು: ಸ್ಪೀಕರ್ ಕಾಗೋಡು ವ್ಯಂಗ್ಯ
ಬೆಂಗಳೂರು, ಮಾ. 21: ‘ರಾಜ್ಯ ಸರಕಾರ ಆದೇಶವೊಂದರ ಮೂಲಕ ರಚಿಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸಲಹಾ ಮಂಡಳಿಯಲ್ಲಿ ಗೃಹ ಸಚಿವರು, ಗೃಹ ಇಲಾಖೆ ಕಾರ್ಯದರ್ಶಿ ಇಲ್ಲದಿದ್ದರೂ ಚಿಂತೆಯಿಲ್ಲ. ಆದರೆ, ಲೋಕೋಪಯೋಗಿ ಸಚಿವರು ಇರಬೇಕಿತ್ತು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜ್ಯ ಸರಕಾರವನ್ನು ತಿವಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಸೋಮವಾರ ವಿಧಾನಸಭೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರಚನೆ ಬಗ್ಗೆ ನಿಯಮ 69ರಡಿ ವಿಷಯ ಪ್ರಸ್ತಾಪಿಸಿ ಮಾತನಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಭ್ರಷ್ಟಾಚಾರ ನಿಗ್ರಹ ದಳದ ಸಲಹಾ ಮಂಡಳಿಯಲ್ಲಿ ಹೊರಗಿನ ವ್ಯಕ್ತಿಗಳಿಗೇನು ಕೆಲಸ ಎಂದು ಪ್ರಶ್ನಿಸಿದರು.
ಕೆಲವೊಮ್ಮೆ ಹೊರಗಿನ ವ್ಯಕ್ತಿಗಳು ಇರಬೇಕಾಗುತ್ತದೆ. ಏಕೆಂದರೆ ಅವರು ಮುಖ್ಯಮಂತ್ರಿಗಳ ಹಿಂದೆ-ಮುಂದೆ ಇರುತ್ತಾರೆ. ಅವರಿಗೆ ಸೂಕ್ತ ಸ್ಥಾನ-ಮಾನ ನೀಡುವುದು ಬೇಡವೇ ಎಂದು ಅವರು, ಲೋಕಾಯುಕ್ತ ಸಂಸ್ಥೆ ಅಧಿಕಾರ ಮೊಟಕುಗೊಳಿಸುವುದಿಲ್ಲ ಎಂದು ಸರಕಾರ ಹೇಳಿದೆ. ಆದರೆ, ಆದೇಶದಲ್ಲಿ ಲೋಕಾಯುಕ್ತಕ್ಕೆ ನೀಡಿದ್ದ ಪೊಲೀಸ್ ಠಾಣೆ ಅಧಿಕಾರವನ್ನು ಕಡಿತಗೊಳಿಸುವುದೇಕೆ? ಎಂದು ಪ್ರಶ್ನಿಸಿದರು.
ಸ್ಪೀಕರ್ ಕಾಗೋಡು ತಿಮ್ಮಪ್ಪ ಹೀಗೆ ಪ್ರಶ್ನಿಸಿದ್ದು ರಾಜ್ಯ ಸರಕಾರಕ್ಕೆ ತೀವ್ರ ಮುಜುಗರ ಆಯಿತು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಕಾನೂನು ಸಚಿವ ಜಯಚಂದ್ರ, ಲೋಕಾಯುಕ್ತ ಸಂಸ್ಥೆಯ ಅಧಿಕಾರ ಮೊಟಕುಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆ ಉದ್ದೇಶವೂ ರಾಜ್ಯ ಸರಕಾರಕ್ಕೆ ಇಲ್ಲ ಎಂದು ಸ್ಪಷ್ಟಣೆ ನೀಡಿದರು.





