ಮೌಢ್ಯ ಪ್ರತಿಬಂಧಕ ಮಸೂದೆ ಜಾರಿ: ಸಿದ್ದರಾಮಯ್ಯ

ಬೆಂಗಳೂರು, ಮಾ.21: ಮೌಢ್ಯಾಚರಣೆ ಪ್ರತಿಬಂಧಕ ಮಸೂದೆ ಜಾರಿಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಮೌಢ್ಯ ಆಚರಣೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ವೌಢ್ಯ ನಿಷೇಧ ಕಾನೂನು ಜಾರಿಗೆ ಬದ್ಧ ಎಂದು ಪರೋಕ್ಷವಾಗಿ ಪ್ರಕಟಿಸಿದರು.
ಎಂಟು ನೂರು ವರ್ಷಗಳ ಹಿಂದೆ ಬಸವಣ್ಣನವರು ಸಮಾಜದಲ್ಲಿ ವೌಢ್ಯಾಚರಣೆ, ಅನಿಷ್ಟ ಜಾತಿ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ್ದರು. ಆದರೂ, ಇಂದಿಗೂ ಅವರ ಪ್ರತಿಪಾದಿಸಿದ ತತ್ವಗಳು ಅನುಷ್ಠಾನಗೊಂಡಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
ಮೌಢ್ಯಾಚರಣೆ ಪ್ರತಿಬಂಧಿಸುವ ನಿಟ್ಟಿನಲ್ಲಿ ಕಾನೂನು ಅಗತ್ಯ. ಅದರ ಜೊತೆಗೆ ಜನಜಾಗೃತಿ ಮೂಡಿಸಬೇಕಿದೆ. ಆಗ ಮಾತ್ರ ಸಮಾಜದಲ್ಲಿ ಮೌಢ್ಯಾಚರಣೆಗಳನ್ನು ದೂರ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ನುಡಿದರು.
ಜಾಗೃತಿ ಮುಖ್ಯ: ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ವೌಢ್ಯ ನಿಷೇಧ ಕಾನೂನು ಜಾರಿ ಸುಲಭದ ವಿಚಾರವಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಬಳಿಕ ಕಾನೂನು ಜಾರಿ ಮಾಡುವುದು ಸೂಕ್ತ ಎಂದು ಸರಕಾರಕ್ಕೆ ಸಲಹೆ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ನಾನು ಬಸವಣ್ಣನ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೆ. ನಾನು ರಾಹುಕಾಲ, ಗುಳಿಕಕಾಲ ನೋಡಿಲ್ಲ. ತಾನು ಸಿಎಂ ಆಗಿದ್ದ ವೇಳೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದೆ. ಮೌಢ್ಯ ನಿಷೇಧ ಕಾನೂನು ಜಾರಿಗೆ ಮೊದಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.







