ಬರಪೀಡಿತ ಲಾತೂರಿನಲ್ಲೀಗ ನೀರಿಗಾಗಿ ದಂಗೆ

ನೀರಿನ ಮೂಲಗಳ ಬಳಿ ಸೆಕ್ಷನ್ 144 ಜಾರಿ
ಲಾತೂರು, ಮಾ.21: ಮಹಾರಾಷ್ಟ್ರದ ಲಾತೂರು ಜಿಲ್ಲೆ ಬರದ ಸಂಕಷ್ಟದಲ್ಲಿ ಸಿಲುಕಿ ನಲುಗುತ್ತಿದೆ. ಈ ಬರಪೀಡಿತ ಪ್ರದೇಶದ ನಿವಾಸಿಗಳಲ್ಲಿ ಹತಾಶೆ ದಿನೇದಿನೇ ಹೆಚ್ಚುತ್ತಿದ್ದು, ಕುಡಿಯುವ ನೀರಿಗಾಗಿ ಯುದ್ಧ ಆರಂಭವಾಗಿದೆ. ಅವರ ನಡುವೆ ಹಿಂಸಾತ್ಮಕ ಘರ್ಷಣೆಗಳ ನಂತರ ಎಚ್ಚೆತ್ತುಕೊಂಡಿರುವ ಆಡಳಿತವು ನೀರಿನ ಮೂಲಗಳಿರುವಲ್ಲಿ ಸೆಕ್ಷನ್ 144ರನ್ವಯ ಜನರು ಗುಂಪು ಸೇರುವುದನ್ನು ನಿಷೇಧಿಸಿದೆ.
ಜಲ ದಂಗೆಗಳ ಭೀತಿಯ ಹಿನ್ನೆಲೆಯಲ್ಲಿ ಬಾವಿಗಳು ಮತ್ತು ಕೆರೆಗಳ ಬಳಿ ಒಂದು ಬಾರಿಗೆ ಐದಕ್ಕಿಂತ ಹೆಚ್ಚು ಜನರು ಸೇರಲು ಅವಕಾಶವಿಲ್ಲ.
ಈಗಾಗಲೇ ಕೆಲವು ಹಿಂಸಾತ್ಮಕ ಘಟನೆಗಳು ವರದಿಯಾಗಿವೆ ಎಂದು ಲಾತೂರು ಜಿಲ್ಲಾ ಪೊಲೀಸ್ ವರಿಷ್ಠ ಜ್ಞಾನೇಶ್ವರ ಚವಾಣ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಬರಪೀಡಿತ ಮರಾಠವಾಡಾ ಪ್ರದೇಶದಲ್ಲಿರುವ ಲಾತೂರು ಹಲವಾರು ವರ್ಷಗಳಿಂದ ನೀರಿನ ಕೊರತೆಯನ್ನು ಅನುಭವಿಸುತ್ತಿದೆ. ಇದೇ ಕಾರಣದಿಂದಾಗಿ ಹೆಚ್ಚಿನವರು ಬಡರೈತರು ಸೇರಿದಂತೆ ಸಾವಿರಾರು ಜನರು ಇತ್ತೀಚೆಗೆ ಈ ಪ್ರದೇಶವನ್ನೇ ತೊರೆದಿದ್ದಾರೆ.
ಕಳೆದ ವರ್ಷ ಮಳೆಯ ಅಭಾವದಿಂದಾಗಿ ಬೆಳೆ ವೈಫಲ್ಯದಿಂದಾಗಿ ಮತ್ತು ಕೃಷಿ ಸಾಲವನ್ನು ತೀರಿಸಲು ಸಾಧ್ಯವಾಗದೆ ಸುಮಾರು 1,400 ಕೃಷಿಕರು ಮರಾಠವಾಡಾ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷವೂ ಹೆಚ್ಚಿನ ಕೆರೆಗಳು ಮತ್ತು ಜಲಾಶಯಗಳು ಬತ್ತಿ ಹೋಗಿದ್ದು ನೀರಿನ ತೀವ್ರ ಕೊರತೆಯುಂಟಾಗಿದೆ. ಹೀಗಾಗಿ ಈ ವರ್ಷ ಇನ್ನಷ್ಟು ಕೆಟ್ಟದ್ದು ಕಾದಿದೆಯೆಂಬ ಭೀತಿ ಅಧಿಕಾರಿಗಳನ್ನು ಕಾಡುತ್ತಿದೆ.







