ತೆರಿಗೆಗಳ್ಳರ ಸ್ವರ್ಗಗಳಲ್ಲಿರುವ ಭಾರತೀಯರ ಕಪ್ಪು ಹಣ 181 ಬಿಲಿಯನ್ ಡಾಲರ್

ಹೊಸದಿಲ್ಲಿ, ಮಾ.21: ವಿಶ್ವಾದ್ಯಂತದ ತೆರಿಗೆಗಳ್ಳರ ಸ್ವರ್ಗಗಳಲ್ಲಿ 6ರಿಂದ 7 ಟ್ರಿಲಿಯನ್ ಡಾಲರ್ ಕಪ್ಪು ಹಣವು ಅಡಗಿಕೊಂಡಿದೆಯೆಂದು ಬ್ಯಾಂಕ್ ಆಫ್ ಇಟಲಿಯ ಮೂವರು ಹಿರಿಯ ಆರ್ಥಿಕ ತಜ್ಞರು ಹೊಸದಾಗಿ ಅಂದಾಜಿಸಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ ಇದರಲ್ಲಿ ಭಾರತೀಯ ಕಪ್ಪು ಕುಳಗಳ ಪಾಲು 152ರಿಂದ 181 ಬಿಲಿಯನ್ ಡಾಲರ್‌ಗಳಿರಬಹುದೆಂದು ಅವರು ಅಂದಾಜಿಸಿದ್ದಾರೆ.
ಇದು ಕೇವಲ ಶೇರುಗಳು ಹಾಗೂ ಬ್ಯಾಂಕ್ ಭದ್ರತೆಗಳು ಅಥವಾ ಬ್ಯಾಂಕ್ ಠೇವಣಿಗಳಲ್ಲಿರುವ ಹಣವಾಗಿದೆ. ರಿಯಲ್ ಎಸ್ಟೇಟ್, ಚಿನ್ನ ಅಥವಾ ಕಲಾಕೃತಿಗಳಂತಹ ಭೌತಿಕ ಆಸ್ತಿಗಳಲ್ಲಿ ಹೂಡಲಾಗಿರುವ ಕಪ್ಪು ಹಣದ ಮಾಹಿತಿ ಪಡೆಯುವುದು ಅಸಾಧ್ಯವಾಗಿದೆ.
ಈ ವಾರ ಬಿಡುಗಡೆಯಾಗಿರುವ ಈ ವರದಿ, ಇತ್ತೀಚಿನ ವರ್ಷಗಳಲ್ಲಿ ನಡೆಸಿರುವ ಹಲವು ಇಂತಹ ಅಂದಾಜುಗಳ ಒಂದು ಭಾಗವಾಗಿದೆ. ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ ಗೇಬ್ರಿಯಲ್ ಝುಕ್ಮನ್ ವಿದೇಶಗಳಲ್ಲಿರುವ ಕಪ್ಪು ಹಣವನ್ನು 7.6 ಟ್ರಿಲಿಯನ್ ಡಾಲರ್‌ಗಳೆಂದು ಅಂದಾಜಿಸಿದ್ದರೆ, ಬೋಸ್ಟನ್ ಕನ್ಸಲ್ಟಿಂಗ್‌ಗ್ರೂಪ್ 8.9 ಟ್ರಿಲಿಯನ್ ಡಾಲರ್ ಹಾಗೂ ಟ್ಯಾಕ್ಸ್ ಜಸ್ಟೀಸ್ ನೆಟ್‌ವರ್ಕ್ 21 ಟ್ರಿಲಿಯನ್ ಡಾಲರ್‌ಗಳೆಂದು ಅಂದಾಜಿಸಿದ್ದಾರೆ.
ಈ ಎಲ್ಲ ಸಂಪತ್ತು ದುರ್ಬಲ ನಿಯಂತ್ರಣ ಹಾಗೂ ಪ್ರಬಲ ಗೌಪ್ಯ ಕಾಯ್ದೆಗಳ ನ್ಯಾಯಾಂಗವ್ಯಾಪ್ತಿಗಳಿರುವ ತೆರಿಗೆ ಸ್ವರ್ಗಗಳಲ್ಲಿ ಹಿಡಿದಿರಿಸಲ್ಟಟ್ಟಿದೆ. ಮೂಲ ಗುರುತನ್ನು ಅಡಗಿಸಲು ಶೆಲ್ ಕಂಪೆನಿಗಳನ್ನು ಬಳಸಲಾಗಿದೆ. ಇಟಲಿಯ ಆರ್ಥಿಕಜ್ಞರು ಈ ಸಂಖ್ಯೆಯನ್ನು ನಿರ್ಧರಿಸಲು ಐಎಂಎಫ್ ಹಾಗೂ ಬ್ಯಾಂಕ್ ಆಫ್ ಇಂಟರ್ನ್ಯಾಶನಲ್ ಸೆಟ್ಲ್‌ಮೆಂಟ್ (ಬಿಐಎಸ್)ಗಳಿಂದ ಮಾಹಿತಿಯನ್ನು ವಿಶ್ಲೇಷಿಸಿದ್ದಾರೆ.
ಈ ಬಾರಿ ಖಜಾನೆಯಲ್ಲಿ ಭಾರತದ ಪಾಲನ್ನು ಅಂದಾಜಿಸುವಂತೆ ಟಿಒಐ ಕೇಳಿದಾಗ, ಸಂಶೋಧಕರು ಬಹಳ ಎಚ್ಚರಿಕೆ ತೋರಿಸಿದ್ದಾರೆ.







