ದಲಿತ ಮೀಸಲಾತಿ ನೀತಿಯಲ್ಲಿ ಬದಲಾವಣೆಯಿಲ್ಲ: ಮೋದಿ

ಹೊಸದಿಲ್ಲಿ,ಮಾ.21: ದಲಿತರ ಮೀಸಲಾತಿ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸೋಮವಾರ ಇಲ್ಲಿ ಸ್ಪಷ್ಟಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದಲಿತರ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು. ಈ ವಿಷಯದಲ್ಲಿ ಪ್ರತಿಪಕ್ಷಗಳು ಸುಳ್ಳುಗಳನ್ನು ಹರಡುತ್ತಿವೆ ಎಂದು ಅವರು ಆಪಾದಿಸಿದರು.
ಇದೇ ವೇಳೆ ಪ್ರಧಾನಿಯವರು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರನ್ನು ಕರಿಯರ ಹಕ್ಕುಗಳಿಗಾಗಿ ಹೋರಾಡಿದ್ದ ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಹೋಲಿಸಿದರು. ಅಂಬೇಡ್ಕರ್ ಸ್ಮಾರಕ ಉಪನ್ಯಾಸವನ್ನು ನೀಡುತ್ತಿದ್ದ ಅವರು,ನಾವು ಅಧಿಕಾರದಲ್ಲಿದ್ದಾಗ ಎಂದೂ ದಲಿತರ ಮೀಸಲಾತಿಗೆ ಯಾವುದೇ ಚ್ಯುತಿಯಾಗಿಲ್ಲ. ಆದರೂ ಜನರನ್ನು ದಾರಿ ತಪ್ಪಿಸಲು ಸುಳ್ಳುಗಳನ್ನು ಹರಡಲಾಗುತ್ತಿದೆ.
ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಮೀಸಲಾತಿಯನ್ನು ರದ್ದುಗೊಳಿಸಲಾಗುತ್ತದೆ ಎಂಬ ಅಪಪ್ರಚಾರ ನಡೆದಿತ್ತು. ಅವರು ಎರಡು ಅವಧಿಗೆ ಪ್ರಧಾನಿಯಾಗಿದ್ದರು. ಆದರೆ ಅಂತಹುದು ಏನೂ ನಡೆಯಲಿಲ್ಲ ಎಂದರು.
ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಬಿಜೆಪಿ ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿದೆ ಮತ್ತು ಈ ರಾಜ್ಯಗಳಲ್ಲಿ ಮೀಸಲಾತಿಗೆಂದೂ ಚ್ಯುತಿಯುಂಟಾಗಿಲ್ಲ. ಆದರೂ ಸುಳ್ಳುಗಳನ್ನು ಹರಡಲಾಗುತ್ತಿದೆ. ಕೇವಲ ರಾಜಕೀಯ ಮಾಡುವುದರಲ್ಲಿಯೇ ಆಸಕ್ತರಾಗಿರುವ ಜನರಿಗೆ ಅದರಿಂದ ಹೊರಬರಲಾಗುತ್ತಿಲ್ಲ ಎಂದರು.
ಮೀಸಲಾತಿ ದಲಿತರು ಮತ್ತು ಶೋಷಿತರ ಹಕ್ಕು, ಅದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಒತ್ತಿಹೇಳಿದ ಅವರು, ನಾನು ಈ ಹಿಂದೆ ಹೇಳಿರುವಂತೆ ಅಂಬೇಡ್ಕರ್ ಅವರೇ ಇಂದು ಪ್ರತ್ಯಕ್ಷರಾದರೂ ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳಲು ಅವರಿಗೂ ಸಾಧ್ಯವಿಲ್ಲ. ಬಾಬಾ ಸಾಹೇಬರ ಮುಂದೆ ನಾವೆಲ್ಲ ಏನೂ ಅಲ್ಲ ಎಂದು ಹೇಳಿದರು.
ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಿದ ಅವರು ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ದಾಳಿ ನಡೆಸಿದರು. ಅವರು ಈ ವಿಷಯದಲ್ಲಿ ಗೊಂದಲ ಮತ್ತು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದ ಮೋದಿ,ಅದು ಅವರ ರಾಜಕೀಯಕ್ಕೆ ನೆರವಾಗುತ್ತದೆ...ಆದರೆ ದೇಶದ ಸಾಮಾಜಿಕ ಸ್ವರೂಪವನ್ನು ದುರ್ಬಲಗೊಳಿಸುತ್ತದೆ ಎಂದು ವಿಷಾದಿಸಿದರು.







