ಹಳ್ಳಕ್ಕೆನುಗ್ಗಿದ ಕೆಎಸ್ಸಾರ್ಟಿಸಿ: 45ಕ್ಕೂ ಹೆಚ್ಚುಮಂದಿಗೆ ಗಾಯ

ಬೇಲೂರು, ಮಾ.21: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಸಾರ್ಟಿಸಿ ಬಸ್ ಹಳ್ಳಕ್ಕೆ ನುಗ್ಗಿದ ಪರಿಣಾಮ 45ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾದ ಘಟನೆ ತಾಲೂಕಿನ ಬೊಮ್ಮಡಿಹಳ್ಳಿಯ ವಾಟೆಹೊಳೆ ಸೇತುವೆ ಸಮೀಪ ನಡೆದಿದೆ.
ಸೋಮವಾರ ಮುಂಜಾನೆ 8:40 ರ ಸಮಯದಲ್ಲಿ ಸಕಲೇಶಪುರದಿಂದ ಬೇಲೂರಿಗೆ ಬರುತ್ತಿದ್ದ ಸಾರಿಗೆ ಬಸ್ ಬಿಕ್ಕೋಡು ಸಮೀಪದ ವಾಟೇಹಳ್ಳ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 60 ಅಡಿಗೂ ಹೆಚ್ಚು ಆಳಕ್ಕೆ ನುಗ್ಗಿದೆ. ಇದರ ಪರಿಣಾಮ 45ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹಳ್ಳಕ್ಕೆ ನುಗ್ಗಿದ್ದ ಬಸ್ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ಬಸ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಹಲವರಿಗೆ ಮುಖ, ಕೈ ಕಾಲು, ತಲೆಗೆ ಪೆಟ್ಟಾಗಿದೆ. ಸಣ್ಣಪುಟ್ಟ ಗಾಯಾಳುಗಳನ್ನು ಬೇಲೂರು ಸರಕಾರಿ ಅಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರ ಗಾಯಾಳುಗಳನ್ನು ಹಾಸನದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ, ಪಘಾತದ ಸುದ್ದಿ ತಿಳಿದು ಆಸ್ಪತ್ರೆಗೆ ಆಗಮಿಸಿದ ಅರೇಹಳ್ಳಿ ಜಿಪಂ ಸದಸ್ಯೆ ರತ್ನಮ್ಮ ಐಸಾಮಿಗೌಡ ಹಾಗೂ ಟಿ.ಡಿ.ಹಳ್ಳಿ ತಾಪಂ ಸದಸ್ಯ ಸೋಮಯ್ಯ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದರು. ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಅರೇಹಳ್ಳಿ ಪೊಲೀಸರು ಗಾಯಾಳುಗಳಿಂದ ಹೇಳಿಕೆಗಳನ್ನು ಪಡೆದು ಪ್ರಕರಣ ದಾಖಲಿಸಿದ್ದಾರೆ.







