ಕ್ಷಿಪಣಿಗಳನ್ನು ಸಮುದ್ರಕ್ಕೆ ಹಾರಿಸಿದ ಉತ್ತರ ಕೊರಿಯ
ಸಿಯೋಲ್ (ದಕ್ಷಿಣ ಕೊರಿಯ), ಮಾ. 21: ಉತ್ತರ ಕೊರಿಯವು ಸೋಮವಾರ ತನ್ನ ಪೂರ್ವ ಭಾಗದ ಕರಾವಳಿಯಲ್ಲಿ ಐದು ಕಿರು ವ್ಯಾಪ್ತಿಯ ಕ್ಷಿಪಣಿಗಳನ್ನು ಸಮುದ್ರಕ್ಕೆ ಹಾರಿಸಿದೆ.
ನೆರೆಯ ದಕ್ಷಿಣ ಕೊರಿಯ ದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಾಯಕ ಕಿಮ್ ಜಾಂಗ್-ಉನ್ ನೀಡಿದ ಆದೇಶದಂತೆ ಸೇನೆಯು ಕ್ಷಿಪಣಿಗಳನ್ನು ಹಾರಿಸುತ್ತಿದೆ. ಕೆಲವೇ ದಿನಗಳ ಹಿಂದೆ ಉತ್ತರ ಕೊರಿಯವು ಎರಡು ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಹಾರಿಸಿತ್ತು. ಉತ್ತರ ಕೊರಿಯದ ಈ ಚಟುವಟಿಕೆಗಳು ವಿಶ್ವಸಂಸ್ಥೆ ನಿರ್ಣಯಗಳ ಅಸ್ವೀಕಾರಾರ್ಹ ಉಲ್ಲಂಘನೆ ಎಂಬುದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬಣ್ಣಿಸಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.
ಉತ್ತರ ಕೊರಿಯವು ಜನವರಿ 6ರಂದು ತನ್ನ ನಾಲ್ಕನೆ ಪರಮಾಣು ಪರೀಕ್ಷೆಯನ್ನು ನಡೆಸಿದಂದಿನಿಂದ ಕೊರಿಯ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆ ನೆಲೆಸಿದೆ. ಅದೂ ಸಾಲದೆಂಬಂತೆ, ಒಂದು ತಿಂಗಳ ಬಳಿಕ ದೀರ್ಘ ವ್ಯಾಪ್ತಿಯ ರಾಕೆಟೊಂದನ್ನು ಉಡಾಯಿಸಿತ್ತು. ಅದು ವಾಸ್ತವವಾಗಿ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷೆ ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿದೆ. ಪೂರ್ವದ ನಗರ ಹಮ್‌ಹಂಗ್‌ನ ಸಮೀಪದಿಂದ ಐದು ಕಿರು ವ್ಯಾಪ್ತಿಯ ಕ್ಷಿಪಣಿಗಳನ್ನು ಹಾರಿಸಲಾಯಿತು ಹಾಗೂ ಅವುಗಳು ಪೂರ್ವ ಸಮುದ್ರ (ಜಪಾನ್ ಸಮುದ್ರ)ಕ್ಕೆ ಅಪ್ಪಳಿಸಿದವು ಎಂದು ದಕ್ಷಿಣ ಕೊರಿಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಇನ್ನೊಂದು ಪರಮಾಣು ಪರೀಕ್ಷೆ?ತಾನು ಜನವರಿಯಲ್ಲಿ ನಡೆಸಿದ ನಾಲ್ಕನೆ ಪರಮಾಣು ಪರೀಕ್ಷೆಗೆ ದಂಡನೆಯಾಗಿ ವಿಶ್ವಸಂಸ್ಥೆ ವಿಧಿಸಿರುವ ಕಠಿಣ ದಿಗ್ಬಂಧನೆಗಳನ್ನು ಧಿಕ್ಕರಿಸಲು ಉತ್ತರ ಕೊರಿಯ ಇನ್ನೊಂದು ಪರಮಾಣು ಪರೀಕ್ಷೆಯನ್ನು ಯಾವಾಗ ಬೇಕಾದರೂ ನಡೆಸುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯದ ಅಧಿಕಾರಿಗಳು ಹೇಳಿದ್ದಾರೆ.





