ರಾಷ್ಟ್ರೀಯ ಪರಿಶಿಷ್ಟ ಆಯೋಗಕ್ಕೆ ಹೈಕೋರ್ಟ್ ನೋಟಿಸ್
ಪರಿಶಿಷ್ಟ ಯೋಜನೆಗಳ ಹಣ ಬೇರೆ ಇಲಾಖೆಗಳ ಪಾಲು
ಚೆನ್ನೈ,ಮಾ.21: ಕೇಂದ್ರ ಸರಕಾರದ ಅನುದಾನದ ನಿಧಿಗಳನ್ನು ಇತರ ಇಲಾಖೆಗಳ ಯೋಜನೆಗಳಿಗೆ ತಿರುಗಿಸಿರುವ ಬಗ್ಗೆ ವಿವರಗಳನ್ನು ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ(ಪಿಐಎಲ್)ಗೆ ಉತ್ತರಿಸಲು ಮದ್ರಾಸ್ ಹೈಕೋರ್ಟ್, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಿದೆ.
ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿ ಎಂ ಸೆಲ್ವರಾಜ್ ಕಳೆದ ವರ್ಷ ಮದ್ರಾಸ್ ಹೈಕೋರ್ಟ್‌ನಲ್ಲಿ ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದರು. ಕಳೆದ ವಾರ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾಯಾಧೀಶ ಎಂ.ಎಂ. ಸುಂದರೇಶ್ ಅವರನ್ನೊಳಗೊಂಡ ನ್ಯಾಯಪೀಠವು, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಿದೆ. ಅರ್ಜಿಗೆ ಸಂಬಂಧಿಸಿ ಮೂರು ವಾರಗಳೊಳಗೆ ಕೌಂಟರ್ ಅಫಿದಾವಿತ್ ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಮೂಲಕ ನೋಟಿಸ್ ಜಾರಿಗೊಳಿಸಿದೆ. ಅರ್ಜಿಯ ಮುಂದಿನ ಆಲಿಕೆಯನ್ನು ನ್ಯಾಯಪೀಠವು ಜೂನ್ 16ಕ್ಕೆ ಮುಂದೂಡಿದೆ.





