ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸ್ಲಂ ನಿವಾಸಿಗಳಿಂದ ಧರಣಿ

ಬೆಂಗಳೂರು, ಮಾ. 21: ನಗರದ ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಸರಕಾರ ಕೂಡಲೇ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿ ಟೌನ್‌ಹಾಲ್‌ನಿಂದ ಬನ್ನಪ್ಪ ಪಾರ್ಕ್‌ವರೆಗೂ ‘ಬಿಡುಗಡೆಯ ಚಿರತೆಗಳು ಕರ್ನಾಟಕ ಸಂಘಟನೆ’ಯ ಕಾರ್ಯಕರ್ತರು ರ್ಯಾಲಿ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಕಾರ್ಯಾಧ್ಯಕ್ಷ ಎಂ.ಎ. ನಝೀಬ್, ಪುರಭವನದ ಬಳಿ ಧರಣಿನಿರತರನ್ನುದ್ದೇಶಿಸಿ ಮಾತನಾಡಿ, ನಗರದಲ್ಲಿ ವಿವಿಧ ಬಡಾವಣೆಗಳ ಸ್ಲಂಗಳಲ್ಲಿ ಅನೇಕ ವರ್ಷಗಳಿಂದ ನೆಲೆಸಿರುವವರಿಗೆ ಇದುವರೆಗೂ ಸರಕಾರ ಹಕ್ಕು ಪತ್ರಗಳನ್ನು ವಿತರಿಸಿಲ್ಲ. ಅಲ್ಲದೆ, ಸ್ಲಂಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಎಂದು ಆರೋಪಿಸಿದರು.
ಬನ್ನೇರುಘಟ್ಟ ರಸ್ತೆ ಎನ್‌ಎಸ್ ಪಾಳ್ಯದ ಸ್ಲಂ ಪ್ರದೇಶವನ್ನು 2011ರಲ್ಲಿ ಜಿಲ್ಲಾಧಿಕಾರಿಗಳು ಸ್ಲಂ ಪ್ರದೇಶವೆಂದು ಘೋಷಿಸಿದ್ದರು. ಆದರೆ ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸ್ಲಂ ನಿವಾಸಿಗಳಿಗೆ ಯಾವುದೇ ಹಕ್ಕು ಪತ್ರಗಳನ್ನು ನೀಡಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸಿದರೆ ನಿರಾಸೆಯ ಪ್ರತಿಕ್ರಿಯೆಯೊಂದೇ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ರೀತಿ, ನಗರದ ಮಡಿವಾಳ, ವಸಂತ ನಗರ, ಪುಟ್ಟೇನಹಳ್ಳಿ, ಗಾಂಧಿನಗರ, ರಾಗಿಗುಡ್ಡ ಸೇರಿದಂತೆ ಇತರ ಸ್ಲಂ ಪ್ರದೇಶಗಳು ಸಂಪೂರ್ಣವಾಗಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಜನಪ್ರತಿನಿಧಿಗಳು ಸ್ಲಂ ನಿವಾಸಿಗಳನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ನಗರದ ಸ್ಲಂಗಳನ್ನು ಅಕ್ರಮವಾಗಿ ಸ್ಥಳಾಂತರಿಸುತ್ತಿದ್ದಾರೆ. ಇದರಿಂದ ಕಡು ಬಡವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸ್ಥಳಾಂತರಿಸಿದ ಸ್ಲಂ ನಿವಾಸಿಗಳಿಗೆ ಸೂಕ್ತ ವಸತಿಯನ್ನು ಇದುವರೆಗೂ ಕಲ್ಪಿಸಿಲ್ಲ. ಹೀಗಾಗಿ ವಸತಿ ರಹಿತ ಸ್ಲಂ ನಿವಾಸಿಗಳ ಜೀವನ ದುಸ್ತರವಾಗಿದೆ ಎಂದು ಹೇಳಿದರು.
ಕೂಡಲೇ ಸರಕಾರ ಸ್ಲಂಗಳ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಅಕ್ರಮವಾಗಿ ತೆರವುಗೊಳಿಸಿರುವ ವಸತಿರಹಿತ ಸ್ಲಂ ನಿವಾಸಿಗಳಿಗೆ ಪುನರ್ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದ ಅವರು, ನಮ್ಮ ಬೇಡಿಕೆಗಳಿಗೆ ಸರಕಾರ ಕೂಲೇ ಸ್ಪಂದಿಸದಿದ್ದರೆ ಶಾಂತಿಯುತವಾದ ಪ್ರತಿಭಟನೆಯ ಸ್ವರೂಪವನ್ನು ಬದಲಾಯಿಸಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.







