ಮಹಾರಾಣಿ ಕಾಲೇಜಿನ ಉಪನ್ಯಾಸಕ ವರ್ಗಾವಣೆ
ತನಿಖೆಗೆ ಒತ್ತಾಯಿಸಿ ಧರಣಿ

ಬೆಂಗಳೂರು, ಮಾ.21: ಮಹಾರಾಣಿ ಕಾಲೇಜಿನ ವಾಣಿಜ್ಯ ವಿಷಯದ ಉಪನ್ಯಾಸಕ ನಾರಾಯಣ ಸ್ವಾಮಿ ವರ್ಗಾವಣೆ ಕುರಿತು ಸರಿಯಾದ ತನಿಖೆ ಆಗಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿನಿಯರು ರಸ್ತೆ ತಡೆದು ಧರಣಿ ನಡೆಸಿದರು.
ಮಹಾರಾಣಿ ಕಾಲೇಜಿನ ವಾಣಿಜ್ಯ ವಿಷಯದ ಉಪನ್ಯಾಸಕ ನಾರಾಯಣ ಸ್ವಾಮಿಯ ವರ್ಗಾವಣೆಯ ಹಿಂದೆ ಪ್ರಾಂಶುಪಾಲೆ ಡಾ.ಕೋಮಲಾ ಅವರ ಕೈವಾಡವಿದೆ. ಇವರು ತಮ್ಮ ಅಧಿಕಾರವನ್ನು ಬಳಸಿಕೊಂಡು ವಾಣಿಜ್ಯ ಶಿಕ್ಷಕನನ್ನು ವರ್ಗಾವಣೆ ಮಾಡಿದ್ದಾರೆ. ಇದರಿಂದ ನಾವು ಉತ್ತಮ ಶಿಕ್ಷಕನನ್ನು ಕಳೆದುಕೊಂಡಂತಾಗಿದೆ ಎಂದು ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಧಿಕ್ಕಾರ ಕೂಗಿದರು.
ಲೈಂಗಿಕ ಕಿರುಕುಳ ಆರೋಪ: ಉಪನ್ಯಾಸಕ ನಾರಾಯಣ ಸ್ವಾಮಿ ಕಾಲೇಜಿನ ಶಿಕ್ಷಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಕಿರುಕುಳಕ್ಕೆ ಒಳಗಾದ ಶಿಕ್ಷಕಿ ಪ್ರಾಂಶುಪಾಲರಿಗೆ ದೂರು ಸಲ್ಲಿಸಿದ್ದಾರೆ ಹಾಗೂ ಈ ಹಿಂದೆಯೂ ನಾರಾಯಣ ಸ್ವಾಮಿಯ ವಿರುದ್ಧ ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಿಸಲಾಗಿದೆ ಎಂದು ಶಿಕ್ಷಕರೊಬ್ಬರು ಹೇಳಿಕೆ ನೀಡಿದರು.
ವಿದ್ಯಾರ್ಥಿಗಳ ನಡುವೆ ವಾಗ್ವಾದ: ಉಪನ್ಯಾಸಕ ನಾರಾಯಣ ಸ್ವಾಮಿಯ ವರ್ಗಾವಣೆಗೆ ಪ್ರಾಂಶುಪಾಲರೇ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಗಳ ಒಂದು ಗುಂಪು ಪ್ರಾಂಶುಪಾಲರ ವಿರುದ್ಧ ಧಿಕ್ಕಾರ ಕೂಗುತ್ತಿದ್ದರೆ, ಮತ್ತೊಂದು ವಿದ್ಯಾರ್ಥಿ ಗುಂಪು ಪ್ರಾಂಶುಪಾಲರ ಪರವಾಗಿ ಘೋಷಣೆಗಳು ಕೂಗುತ್ತಿದ್ದರು. ಇದರಿಂದ ಕಾಲೇಜಿನ ಶಿಕ್ಷಕರು ಎರಡು ಗುಂಪಿನ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿದರು.
ತನಿಖೆಗೆ ಆದೇಶ: ಉಪನ್ಯಾಸಕ ನಾರಾಯಣ ಸ್ವಾಮಿಯ ಪರವಾಗಿ ಹಾಗೂ ವಿರೋಧವಾಗಿ ಎರಡು ಗುಂಪಿನ ವಿದ್ಯಾರ್ಥಿಗಳು ಹೋರಾಟವನ್ನು ತೀವ್ರಗೊಳಿಸಿದರು. ಈ ವೇಳೆ ಸ್ಥಳಕ್ಕೆ ಶಿಕ್ಷಣ ಇಲಾಖೆ ಪ್ರತಿನಿಧಿಗಳನ್ನು ಆಗಮಿಸಿ ಎರಡು ಗುಂಪಿನ ಮನವಿ ಪತ್ರವನ್ನು ಸ್ವೀಕರಿಸಿ, ಶಿಕ್ಷಕ ನಾರಾಯಣ ಸ್ವಾಮಿ ವರ್ಗಾವಣೆ ಕುರಿತು ಸರಿಯಾದ ತನಿಖೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.







