ವೃದ್ಧರು, ಅಶಕ್ತರಿಗೆ ಮನೆಯಲ್ಲೇ ಆಧಾರ್ ನೋಂದಣಿ

ಉಡುಪಿ, ಮಾ.21: ಎಲ್ಲ ನಾಗರಿಕರ ಆಧಾರ್ ನೋಂದಣಿ ಮಾಡುವ ಸಲುವಾಗಿ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಆಧಾರ್ ನೋಂದಣಿ ಕಿಟ್‌ಗಳು ಕಾರ್ಯಾಚರಿಸುತ್ತಿವೆ. ಆದರೆ ನೋಂದಣಿ ಕೇಂದ್ರಗಳಿಗೆ ಬರಲು ಅಶಕ್ತರಾದ ವಯೋ ವೃದ್ಧರು, ಮಾನಸಿಕ ಅಸ್ವಸ್ಥರು ಹಾಗೂ ಇತರ ಅಶಕ್ತ ವ್ಯಕ್ತಿ ಗಳಿಗಾಗಿ ಮಾನವೀಯ ನೆಲೆಯಲ್ಲಿ ಅವರ ಮನೆಗೆ ತೆರಳಿ ಆಧಾರ್ ನೋಂದಣಿ ಮಾಡಿಸುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಅಂತಹ ವ್ಯಕ್ತಿಗಳಿಂದ ಲಿಖಿತ ಬೇಡಿಕೆಗಳು ಬಂದು ಅವರು ಸ್ವಂತ ವಾಹನ ವ್ಯವಸ್ಥೆ ಕಲ್ಪಿಸಿದಲ್ಲಿ ಅವರ ವಾಹನ ದಲ್ಲಿ ನೋಂದಣಿ ಕಿಟ್ ಹಾಗೂ ಆಪರೇಟರ್‌ನ್ನು ಬೇಡಿಕೆದಾರರ ಮನೆಗೆ ಕಳುಹಿಸಿ ನೊಂದಣಿ ಮಾಡಿಸಲಾಗುವುದು. ಒಂದು ವೇಳೆ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ ಅಂಥವರ ಬೇಡಿಕೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು.
ಅರ್ಹರಿದ್ದಲ್ಲಿ ನಾಗರಿಕರು ಅಥವಾ ಅವರ ಕುಟುಂಬ ಸದಸ್ಯರು ಹತ್ತಿರದ ತಾಲೂಕು ಕಚೇರಿ, ನಾಡ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ ಅಥವಾ ಗ್ರಾಮಕರಣಿಕರ ಕಚೇರಿ ಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.





